ಒಪೆಕ್ ಪುನಾರಂಭ ಪ್ರಕ್ರಿಯೆ; ನೇಮಕಾತಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.10
ಇಲ್ಲಿನ ಒಪೆಕ್ ಆಸ್ಪತ್ರೆಗೆ ಸ್ವಾಯತ್ತತೆ ನೀಡಿ ಆಸ್ಪತ್ರೆ ಪುನಾರಂಭಿಸಬೇಕೆಂಬ ಸ್ಥಳೀಯರ ಬೇಡಿಕೆ ಬದಿಗಿರಿಸಿದ ರಾಜ್ಯ ಸರ್ಕಾರ ಆಸ್ಪತ್ರೆಯನ್ನು ರಿಮ್ಸ್ ಅಡಿಯಲ್ಲಿಯೇ ನಿರ್ವಹಿಸಲು ನಿರ್ಧರಿಸಿ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಮುಚ್ಚಿರುವ ಇಲ್ಲಿನ ಒಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪುನಾರಂಭಕ್ಕೆ ಸರ್ಕಾರ ಮುಂದಾಗಿದ್ದು, ಅದಕ್ಕೆ ಅವಶ್ಯಕ ಸಿಬ್ಬಂದಿಯ ನೇಮಕಾತಿಗೆ ಮುಂದಾಗಿದೆ. ಗುರುವಾರ 60 ಜನ ಶುಶ್ರೂಷಕರ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಿತು.
ಅದೇ ರೀತಿ ಆಸ್ಪತ್ರೆಯ ಪುನಾರಂಭ ನಿಟ್ಟಿನಲ್ಲಿ ಸ್ವಚ್ಛತೆ ಕಾರ್ಯಕ್ಕೆ 1.75 ಕೋಟಿ ವೆಚ್ಚದ ಟೆಂಡರ್ ಕರೆದಿದ್ದು, ವೈದ್ಯರ ನೇಮಕಾತಿಗೆ ಜು.17ರಂದು ಚಾಲನೆ ನೀಡುವ ಉದ್ದೇಶವಿದೆ ಎಂದು ಹೇಳಲಾಗಿದ್ದು, ಆರಂಭದಲ್ಲಿ ಆರು ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳಿಗೆ ವೈದ್ಯರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಒಪೆಕ್ ಆಸ್ಪತ್ರೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಕಾಲೇಜು ಆಗಿ ಪರಿವರ್ತಿಸುವ ಮೂಲಕ ಆಸ್ಪತ್ರೆಯ ನಿರಂತರ ನಿರ್ವಹಣೆಗೆ ಪೂರಕ ವ್ಯವಸ್ಥೆ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದೂ ಗೊತ್ತಾಗಿದೆ.
ಈ ಮಧ್ಯೆ ಒಪೆಕ್ ಆಸ್ಪತ್ರೆಯನ್ನು ಸ್ವಾಯತ್ತ ಸಂಸ್ಥೆಯಾಗಿಸಬೇಕು ಎಂಬ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಬೇಡಿಕೆಗೆ ಸರ್ಕಾರ ಬೆಲೆ ನೀಡದೇ ರಿಮ್ಸ್ ವೈದ್ಯಕೀಯ ಕಾಲೇಜಿನ ಅಡಿಯಲ್ಲಿ ಆಸ್ಪತ್ರೆ ನಿರ್ವಹಿಸಲು ನಿರ್ಧರಿಸಿರುವುದು ಮತ್ತಷ್ಟು ಗೊಂದಲಗಳಿಗೆ ದಾರಿ ಮಾಡಿದಂತಾಗಿದೆ.