ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜನಸಂಖ್ಯೆ ಹೆಚ್ಚಳದಿಂದ ಪ್ರತಿಕೂಲ ಪರಿಣಾಮ

Lingaraj Badiger
Updated On : 12 Jul 2013, 11:04 am

ರಾಯಚೂರು: ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಪ್ರತಿಕೂಲ ಪರಿಣಾಮಗಳಾಗುತ್ತಿದ್ದು, ದೇಶದಲ್ಲಿ ಸಹ ಜನಸಂಖ್ಯೆಯ ಬೆಳವಣಿಗೆಯಿಂದ ಸಂಪನ್ಮೂಲಗಳ ಹಂಚಿಕೆಯಲ್ಲಿ ಹಿನ್ನಡೆಯಾಗುತ್ತಿದೆ ಎಂದು ಜಿಪಂ ಸಿಇಒ ಜ್ಞಾನಪ್ರಕಾಶ್ ಕಳವಳ ವ್ಯಕ್ತಪಡಿಸಿದರು.
ನಗರದ ಟ್ಯಾಗೋರ್ ಸ್ಮಾರಕ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನನ-ಮರಣದ ನಡುವಿನ ಅಂತರ ಕಡಿಮೆಯಾಗುತ್ತಿರುವುದೂ ಜನಸಂಖ್ಯೆಯ ಹೆಚ್ಚಳಕ್ಕೆ ದಾರಿಯಾಗಿದೆ. ಕೈಗಾರಿಕಾ ಕ್ರಾಂತಿ ಬಳಿಕ ಅನೇಕ ರೋಗಗಳಿಗೆ ಔಷಧ ಕಂಡುಹಿಡಿದ ವಿಜ್ಞಾನಿಗಳು, ಮಾನವ ಪ್ರಾಣ ರಕ್ಷಣೆಗೆ ಮುಂದಾದರು. ಅದು ಜನಸಂಖ್ಯಾ ಸ್ಫೋಟಕ್ಕೆ ದಾರಿಯಾಯಿತು ಎಂದು ಹೇಳಿದರು.
ಪರಿಸರ ರಕ್ಷಣೆಗೆ ಹಿನ್ನಡೆ: ಜನಸಂಖ್ಯೆಯ ಹೆಚ್ಚಳದಿಂದ ಸೌಲಭ್ಯಗಳ ಕೊರತೆ, ಕುಡಿಯುವ ನೀರಿಗೆ ಪರದಾಟ, ಪರಿಸರ ರಕ್ಷಣೆಗೆ ಹಿನ್ನಡೆಯಾಗುತ್ತಿದೆ. ಒಂದು ಅಂದಾಜಿನಂತೆ 2050ರ ವೇಳೆಗೆ ವಿಶ್ವದ ಜನಸಂಖ್ಯೆ 1 ಸಾವಿರ ಕೋಟಿ ದಾಟುವ ಸಾಧ್ಯತೆಯಿದ್ದು, ಆನಂತರದಲ್ಲಿ ಭೂಮಿಯ ಮೇಲಿನ ಬದುಕು ಕಷ್ಟಸಾಧ್ಯ ಎಂಬಂತಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನಸಂಖ್ಯೆಯ ಹೆಚ್ಚಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯ. ಅದರಲ್ಲೂ ಯುವಕರು ಸೂಕ್ತ ವಯಸ್ಸಿನಲ್ಲಿ ಮದುವೆ, ಕನಿಷ್ಠ ಮೂರು ವರ್ಷಗಳವರೆಗೂ ಮೊದಲ ಮಗು ಪಡೆಯದಿರುವುದು, ಮಕ್ಕಳಿಗೆ ಜನ್ಮ ನೀಡುವಲ್ಲಿ ಕನಿಷ್ಠ 4 ವರ್ಷಗಳ ಅಂತರ ಕಾಯ್ದುಕೊಳ್ಳುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಇತರೆ ಸಲಹೆಗಳನ್ನು ಅರಿತು ಜೀವನದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದರು.
ಜನಾರೋಗ್ಯದ ಮೇಲೆ ನಿರ್ಧಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ ನಾಯಕ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆ ದೇಶದ ಜನರ ಆರೋಗ್ಯದ ಮೇಲೆ ನಿರ್ಧಾರವಾಗುತ್ತದೆ. ಜನನ-ಮರಣ ಪ್ರಮಾಣ, ಶಿಶು, ಗರ್ಭಿಣಿಯರ ಮರಣಗಳ ನಿಯಂತ್ರಣದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಸುಭಾಷರೆಡ್ಡಿ ಪಾಟೀಲ್ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಸೋಮಶೇಖರ ಹೊಸಮನಿ, ನಿರ್ದೇಶಕ ಚಿನ್ನುಮಿಯಾ ತಲ್ಮಾರಿ, ಕಾರ್ಯದರ್ಶಿ ವಿದ್ಯಾಸಾಗರ್ ಚಿಣಮಗೇರಿ ಇದ್ದರು. ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾಗೃತಿ ಜಾಥಾ: ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಜಾಥಾಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement