ತಂದಿತು ರೈತರಲ್ಲಿ ಸಂಭ್ರಮದ ಅಲೆ
ರಾಯಚೂರು: ಜಿಲ್ಲೆಯಲ್ಲಿ ಮಳೆಯ ಸುಳಿವಿಲ್ಲದೇ ಕಂಗಾಲಾಗಿದ್ದ ರೈತರಲ್ಲೀಗ ಸಂಭ್ರಮ ಮನೆ ಮಾಡಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ ರೈತರಲ್ಲಿ ಆಶಾಕಿರಣ ಮೂಡಿಸಿದೆ. ಕಳೆದ ಎರಡು ವರ್ಷಗಳಿಂದ ಭೀಕರ ಬರ ಎದುರಿಸಿದ್ದ ರೈತರಿಗೆ ಸದ್ಯಕ್ಕೆ ಆತಂಕ ದೂರವಾಗಿದೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರದ ಛಾಯೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಅಭಾವ. ಜತೆಗೆ ಮೇವಿನ ಕೊರತೆಯೂ ಕಾಡಿತ್ತು. ಪ್ರಸಕ್ತ ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಮೇ ಮತ್ತು ಜೂನ್ ಮೊದಲ ವಾರದಲ್ಲಿ ಸುರಿದ ಮಳೆ ರೈತರಲ್ಲಿ ಸಂತಸ ತಂದಿತು. ಆದರೆ ಆನಂತರದಲ್ಲಿ ಮಳೆ ಮಾಯವಾಗಿದ್ದು, ರೈತರಲ್ಲಿ ಆತಂಕಕ್ಕೆ ದಾರಿ ಮಾಡಿತ್ತು.
ಆತಂಕ ದೂರ: ಮಳೆಯಾಶ್ರಿತ ಪ್ರದೇಶದ ರೈತರು ಆರಂಭದಲ್ಲಿ ಸುರಿದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಡಗಿದ್ದರು. ಅನೇಕರು ಬಿತ್ತನೆ ಕಾರ್ಯದಲ್ಲಿಯೂ ತೊಡಗಿದ್ದರು. ಮತ್ತೊಂದೆಡೆ ಕೃಷಿ ಇಲಾಖೆ ಸಹ ರೈತರಿಗೆ ಅಗತ್ಯವಾಗಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಿ ಒದಗಿಸಲು ಮುಂದಾಗಿತ್ತು.
ಆದರೆ ಜೂನ್ ಎರಡನೇ ವಾರದ ನಂತರ ಜಿಲ್ಲೆಯಲ್ಲಿ ಮಳೆ ಸುರಿಯದೇ ರೈತರು ಆತಂಕಕ್ಕೆ ಸಿಲುಕಿದ್ದರು. ಬಿತ್ತನೆ ಮಾಡಿದ ಬೆಳೆಯ ಹಾನಿ ಭೀತಿಯೂ ಎದುರಾಗಿತ್ತು. ಅದರಿಂದ ಪ್ರಸಕ್ತ ವರ್ಷವೂ ಬರ ಆವರಿಸಲಿದೆಯೇ ಎಂಬ ಅನುಮಾನ ರೈತರಲ್ಲಿ ಮೂಡಿತ್ತು. ಆದರೆ ಬುಧವಾರದಿಂದೀಚೆಗೆ ದಿನವಿಡೀ ಜಿಲ್ಲಾದ್ಯಂತ ಸುರಿದ ಮಳೆ ರೈತರಲ್ಲಿ ಭರವಸೆ ಮೂಡಿಸಿದೆ.
ಬಿತ್ತನೆ ಕುಂಠಿತ: ಜಿಲ್ಲೆಯಲ್ಲಿ ಜುಲೈ ತಿಂಗಳ ವಾಡಿಕೆ ಮಳೆ ಪ್ರಮಾಣ 108 ಮಿಮೀ ಆಗಿದ್ದು, ಜುಲೈ ಮೊದಲ ವಾರಾಂತ್ಯಕ್ಕೆ ಕೇವಲ 31 ಮಿಮೀ ಮಳೆಯಾಗಿದೆ. ಅದರಲ್ಲೂ ಜಿಲ್ಲೆಯ ರಾಯಚೂರು ಹಾಗೂ ಲಿಂಗಸ್ಗೂರು ತಾಲೂಕಿನಲ್ಲಿ ಮಳೆಯ ಕೊರತೆಯಾಯಿತು. ಮೇ 29, ಜೂನ್ ತಿಂಗಳ 1, 6, 7 ಮತ್ತು 14 ತಾರೀಕಿನ ನಂತರದಲ್ಲಿ ಮಳೆ ಜಿಲ್ಲೆಯಿಂದಲೇ ದೂರವಾಗಿದ್ದು ಆತಂಕ ಸೃಷ್ಟಿಸಿತು.
ಪರಿಣಾಮ ಜಿಲ್ಲೆಯಲ್ಲಿ ಬಿತ್ತನೆಗೆ ಹಿನ್ನಡೆಯಾಯಿತು. ಮಳೆಯಾಶ್ರಿತ ಪ್ರದೇಶದ ಬಿತ್ತನೆ ಗುರಿ 1,59,500 ಹೆಕ್ಟೇರ್ ಪೈಕಿ ಕೇವಲ 76,338 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇದು ಮಳೆಯ ಅಭಾವವನ್ನು ಸ್ಪಷ್ಟಪಡಿಸುತ್ತದೆ. ರೈತರು ಮಳೆಯಾಗದ್ದರಿಂದಲೇ ಬಿತ್ತನೆ ಕೈಬಿಟ್ಟು ಮಳೆಯ ಆಗಮನಕ್ಕೆ ಕಾದು ಕುಳಿತರು. ಮಳೆಯ ಕೊರತೆ ರೈತರಲ್ಲಿ ಆತಂಕ ತಂದಿತ್ತು. ಆದರೆ ಬುಧವಾರ ಮತ್ತು ಗುರುವಾರ ದಿನವಿಡೀ ಸುರಿದ ಮಳೆಯು ರೈತರಲ್ಲಿ ಮತ್ತೆ ಆಶಾಭಾವನೆ ಮೂಡಿಸಿತು.
ರೈತರಲ್ಲಿ ಸಂತಸ: ಈ ಕುರಿತು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಅವರು 'ಕನ್ನಡಪ್ರಭ'ಕ್ಕೆ ಮಾತನಾಡಿ, ರೈತರು ಬಿತ್ತನೆ ಕೈಗೊಂಡು ಮೊಳಕೆ ಒಡೆಯುವುದನ್ನು ಕಾಯುತ್ತಿದ್ದರು. ಆದರೆ ಮಳೆ ಜೂನ್ ತಿಂಗಳಿನಲ್ಲಿ ಕೈಕೊಟ್ಟಿದ್ದರಿಂದ ಆತಂಕದಲ್ಲಿದ್ದರು. ಆದರೆ ಕಳೆದ ಎರಡು ದಿನಗಳಿಂದ ಜಿಲ್ಲೆಯ ಎಲ್ಲೆಡೆ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ ಎಂದಿದ್ದಾರೆ.
ಕಳೆದ ಎರಡು ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳ ವೈಫಲ್ಯದಿಂದ ಭೀಕರ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರಿಗೆ ತಡವಾಗಿಯಾದರೂ ಮಳೆ ಸುರಿದು ತಂಪು ತಂದಿದೆ. ಜತೆಗೆ ಬಿತ್ತನೆ ಮಾಡಿರುವ ರೈತರಿಗೆ ಭರವಸೆ ಮೂಡಿಸಿದರೆ, ಇನ್ನುಳಿದ ರೈತರಿಗೆ ಬಿತ್ತನೆಗೆ ತೊಡಗಲು ಸ್ಫೂರ್ತಿ ತಂದಿರುವುದಂತೂ ಸತ್ಯ.
489.250 ಮೀ. ನೀರು ಸಂಗ್ರಹ(ಲಿಂಗಸ್ಗೂರು ವರದಿ): ನಾರಾಯಣಪುರ ಜಲಾಶಯದಲ್ಲಿ ಗುರುವಾರದಂದು 489.250 ಮೀಟರ್ (20.5 ಟಿಎಂಸಿ) ನೀರು ಸಂಗ್ರಹವಾಗಿರುತ್ತದೆ. ಆಲಮಟ್ಟಿ ಜಲಾಶಯದಿಂದ ನೀರಿನ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಗುರುವಾರ 22 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 492.252 ಮೀಟರ್ (33.313 ಟಿಎಂಸಿ) ಇರುತ್ತದೆ.
ವಿದ್ಯುತ್ ತಗುಲಿ ಎರಡು ಹಸು ಸಾವು
ರಾಯಚೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಗುರುವಾರ ಬೆಳಗ್ಗೆ ವಿದ್ಯುತ್ ಪರಿವರ್ತಕಕ್ಕೆ ಅಳವಡಿಸಿದ್ದ ತಂತಿ ತಗುಲಿ ಎರಡು ಹಸುಗಳು ಬಲಿಯಾಗಿವೆ. ನಗರದ ಲೋಹಾರವಾಡಿ ಪ್ರದೇಶದಲ್ಲಿ ಬೆಳಗ್ಗೆ ಪರಿವರ್ತಕದ ಬಳಿ ತೆರಳಿದ ಎರಡು ಹಸುಗಳಿಗೆ ವಿದ್ಯುತ್ ತಂತಿ ಸ್ಪರ್ಶವಾಗಿದ್ದರಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನಗರಸಭೆ ಸಿಬ್ಬಂದಿ ಮತ್ತು ಜೆಸ್ಕಾಂ ಸಿಬ್ಬಂದಿ ಮೃತ ಹಸುವಿನ ದೇಹವನ್ನು ತೆರವುಗೊಳಿಸಿದರು.