ನಾಳೆ ಬ್ಯಾಂಕ್ ಮುಂದೆ ಧರಣಿ
ರಾಯಚೂರು: ಜಿಲ್ಲೆಯಲ್ಲಿನ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಆರ್ಬಿಐ ಹಾಗೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರ ಖಾತೆ ತೆರೆಯಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಜು.15 ರಂದು ಎಲ್ಲ ಬ್ಯಾಂಕುಗಳ ಎದುರು ಸತ್ಯಾಗ್ರಹ ನಡೆಸಲು ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ನಿರ್ಧರಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯು, ಕಳೆದ ಮೂರು ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಅವರ ಕೂಲಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸೂಚಿಸಿದೆ.
ಕೇಂದ್ರ ಸರ್ಕಾರ ಆದೇಶ ಜಾರಿಗೊಳಿಸಿದ ದಿನದಿಂದ ಸಂಘಟನೆಯು ಬ್ಯಾಂಕುಗಳಲ್ಲಿ ಕಾರ್ಮಿಕರ ಖಾತೆ ತೆರೆಯುವಂತೆ ಮಾಡಲು ನಿರಂತರ ಪ್ರಯತ್ನಿಸುತ್ತಿದೆ.
ಜಿಪಂ ಮೂಲಕವೂ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಬ್ಯಾಂಕ್ ಖಾತೆ ತೆರೆಯುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಬ್ಯಾಂಕುಗಳು ಆರ್ಬಿಐ ಮತ್ತು ಕೇಂದ್ರ ಸರ್ಕಾರದ ಆದೇಶ ಉಲ್ಲಂಘಿಸುತ್ತಿದ್ದು, ಕಾರ್ಮಿಕರ ಖಾತೆ ತೆರೆಯಲು ಅವಕಾಶ ನೀಡುತ್ತಿಲ್ಲ.
ಕೆಲ ಬ್ಯಾಂಕುಗಳಲ್ಲಿ ಮಾತ್ರ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಇನ್ನುಳಿದ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಅಲ್ಲಿನ ಸಿಬ್ಬಂದಿ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಕೂಲಿಕಾರ್ಮಿಕರು ಕೆಲಸ ನಿರ್ವಹಿಸಿಯೂ ಕೂಲಿ ಹಣ ಬಾರದೇ ಪರದಾಡುವಂತಾಗಿದೆ ಎಂದು ಆರೋಪಿಸಿದೆ.
ಬ್ಯಾಂಕ್ ಖಾತೆ ತೆರೆಯುವ ವಿಚಾರಕ್ಕೆ ಸಂಬಂಧಿಸಿ ಸಂಘಟನೆಯಿಂದ ಅನೇಕ ಬಾರಿ ಹೋರಾಟ ಮಾಡಲಾಗಿದೆ.
ಆ ವೇಳೆ ಜಿಪಂ ಸಿಇಒ ಹಾಗೂ ಏರಿಯಾ ಬ್ಯಾಂಕ್ ವ್ಯವಸ್ಥಾಪಕರು ಭರವಸೆ ನೀಡಿ ನಂತರದಲ್ಲಿ ಭರವಸೆಯಂತೆ ಕಾರ್ಯನಿರ್ವಹಿಸಿಲ್ಲ ಎಂದು ಆರೋಪಿಸಿದೆ.
ಈ ರೀತಿಯ ನಿರ್ಲಕ್ಷ್ಯ ಖಂಡಿಸಿ ಜು.15 ರಂದು ಜಿಲ್ಲೆಯಲ್ಲಿನ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಆರ್ಬಿಐ ಬ್ಯಾಂಕುಗಳ ಮುಂದೆ ಸತ್ಯಾಗ್ರಹ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಎಲ್ಲ ಕೂಲಿಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಂಘಟನೆ ಮನವಿ ಮಾಡಿದೆ.