ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಒಪೆಕ್ ಆರಂಭಕ್ಕೆ ಅಡ್ಡಗಾಲು: ಆಸ್ಪತ್ರೆ ನೌಕರರ ಖಂಡನೆ

Lingaraj Badiger
Updated On : 15 Jul 2013, 11:15 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.14
ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಒಪೆಕ್) ಆರಂಭಕ್ಕೆ ಅಡ್ಡಗಾಲು ಹಾಕಿ ರಿಮ್ಸ್‌ನ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಪಿತೂರಿ ಕ್ರಮಕ್ಕೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೌಕರರ ಸಂಘ ಪತ್ರಿಕಾ ಪ್ರಕಟಣೆ ಮೂಲಕ ಖಂಡಿಸಿದೆ.
ಕಳೆದ 10-11ವರ್ಷಗಳಿಂದ ಆರ್‌ಜಿಎಸ್‌ಎಸ್‌ಎಚ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿದ 286 ಸಿಬ್ಬಂದಿ ಹಾಗೂ ವೈದ್ಯರಿಗೆ ಸಿಗಬೇಕಾದ ಆದ್ಯತೆ ಮತ್ತು ಸೇವಾ ಹಿರಿತನ ಮುಚ್ಚಿ ಹಾಕಲು ಮುಂದಾಗಿರುವುದು ಒಪೆಕ್ ಸಿಬ್ಬಂದಿಯನ್ನೇ ತುಕಡಿ ಮಾಡಲು ಹೊರಟಿದೆ. ಸಂಘದ ಕೆಲ ಪದಾಧಿಕಾರಿ ಸಿಬ್ಬಂದಿಗೆ ಗುಪ್ತ ಆಮಿಷ ಒಡ್ಡಿ ರಿಮ್ಸ್‌ನತ್ತ ಸೆಳೆದುಕೊಳ್ಳುವ ಕೆಲಸ ನಡೆದಿದೆ ಎಂದು ಆರೋಪಿಸಿದ್ದಾರೆ.
ನೇಮಕ: ಆಸ್ಪತ್ರೆ ಸಿಬ್ಬಂದಿ ಹಾಗೂ ಕಾರ್ಮಿಕರ 57 ದಿನಗಳ ಸತತ ಹೋರಾಟ ಮತ್ತು ಜಿಲ್ಲೆಯ ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು ಒಗ್ಗೂಡಿ ರಚಿಸಿಕೊಂಡ ಒಪೆಕ್ ಆಸ್ಪತ್ರೆ ಉಳಿಸಿ, ಸಮಿತಿ ಹೋರಾಟಕ್ಕೆ ಮಣಿದು 2012 ಜುಲೈ 29 ಮತ್ತು 2012 ಆಗಸ್ಟ್ 1ರಂದು ರಾಜ್ಯ ಸರ್ಕಾರ ಆರ್‌ಜಿಎಸ್‌ಎಸ್‌ಎಚ್‌ನ್ನು ಸ್ವಾಯತ್ತ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಸರ್ಕಾರದಿಂದಲೇ ಆರಂಭಿಸುವುದಾಗಿ ಹಾಗೂ 286 ಸಿಬ್ಬಂದಿಗೆ ಆದ್ಯತೆ ನೀಡುವುದಾಗಿ ಆದೇಶ ಹೊರಡಿಸಿ, ಮೊದಲು 640ಹುದ್ದೆಗಳ ಯೋಜನೆ ರೂಪಿಸಿ, ನಂತರ ಹುದ್ದೆಗಳ ಪ್ರಮಾಣ 360ಕ್ಕೆ ಇಳಿಸಲಾಯಿತು. ಆದೇಶ ಮತ್ತು ಸುತ್ತೋಲೆ ಮೂಲೆಗುಂಪು ಮಾಡಿ, ಕೇವಲ 200 ಹುದ್ದೆಗಳನ್ನು ನೇಮಕಗೊಳಿಸಲು ಉದ್ದೇಶಿಸಿದ್ದು, ಅದೂ ರಿಮ್ಸ್‌ನ ಬೋಧಕ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.
ಹತ್ತಿಕ್ಕುವ ತಂತ್ರ: ಒಪೆಕ್‌ನಲ್ಲಿ ಕೆಲಸ ಮಾಡಿದ ನರ್ಸಿಂಗ್ ಸಿಬ್ಬಂದಿ ಪೈಕಿ ಕೆಲವರಿಗೆ ಎಸ್‌ಎಂಎಸ್ ಹಾಕಿ 2013 ಜು.11ರಂದು ದಾಖಲಾತಿ ಸಮೇತ ರಿಮ್ಸ್ ನಿರ್ದೇಶಕರ ಕಚೇರಿಗೆ ಬಂದು ಕೆಲಸಕ್ಕೆ ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ಉಳಿದ ಬಹುಸಂಖ್ಯಾತರನ್ನು ಬೀದಿಪಾಲು ಮಾಡುವ ಮೂಲಕ ಸಿಬ್ಬಂದಿ ಹಾಗೂ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ತಂತ್ರ ಅನುಸರಿಸಲಾಗುತ್ತಿದೆ. 10-11 ವರ್ಷ ಸೇವಾ ಹಿರಿತನ ಹೊಂದಿದ ಸಿಬ್ಬಂದಿಗಳನ್ನು ಪುನಃ ಎಬಿಸಿಡಿ ಸ್ಟೈಫಂಡರಿ ಸೇವೆ ಮೂಲಕ ವಂಚಿಸುವ ಹುನ್ನಾರ ನಡೆದಿದೆ ಎಂದು ದೂರಿದ್ದಾರೆ.
ಹುನ್ನಾರ: ರಿಮ್ಸ್‌ಗೆ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಭೇಟಿ ನೀಡುವ ಎಂಸಿಐ ತಂಡದ ಪರಿಶೀಲನೆಗೆ ಸಾಮಗ್ರಿ ಹಾಗೂ ಸಿಬ್ಬಂದಿ ತೋರಿಸುವ ಹುನ್ನಾರ ಒಂದೆಡೆಯಾದರೆ ಒಪೆಕ್ ಆರಂಭಗೊಳ್ಳದಂತೆ ನೋಡಿಕೊಳ್ಳುವ ಖಾಸಗಿ ಆಸ್ಪತ್ರೆಗಳ ಲಾಭಿ ಮತ್ತೊಂದು ಕಡೆ ನಡೆದಿದೆ. ಒಪೆಕ್ ಒಂದು ಸ್ವಾಯತ್ತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಆರಂಭವಾಗಬೇಕು. ರಿಮ್ಸ್‌ನೊಳಗೆ ಗುಪ್ತವಾಗಿ ನಡೆಯುತ್ತಿರುವ ಸಂಚಯಿತ ವೇತನಾಧಾರಿತ ನೇಮಕಾತಿ ನಿಲ್ಲಬೇಕು. 286 ಜನ ಸಿಬ್ಬಂದಿ ಹಾಗೂ ಕಾರ್ಮಿಕರ ಸೇವಾ ಹಿರಿತನದ ಆಧಾರದ ಮೇಲೆ ಸೇವೆ ಮುಂದುವರಿಸಬೇಕೆಂದು ಒಪೆಕ್ ನೌಕರರ ಸಂಘದ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರಾದ ಎನ್. ಕುಮಾರ, ಪಿ. ಮಲ್ಲೇಶ, ಗೌರವಾಧ್ಯಕ್ಷ ಆರ್. ಮಾನಸಯ್ಯ ಒತ್ತಾಯಿಸಿದ್ದಾರೆ.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement