ಲಕ್ಷಾಂತರ ಹಣ ಲೂಟಿ ಆರೋಪ: ಕ್ರಮಕ್ಕೆ ಆಗ್ರಹ
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಧಡೇಸ್ಗೂರು ಗ್ರಾಪಂ.ನಲ್ಲಿ ಅನಧಿಕೃತವಾಗಿ ಜಲನಿರ್ಮಲ ಸಮಿತಿ ರಚಿಸಿಕೊಂಡು ಲಕ್ಷಾಂತರ ಹಣ ಗುಳುಂ ಮಾಡುತ್ತಿದ್ದು, ಕೂಡಲೆ ಗ್ರಾಪಂಗೆ ಭೇಟಿ ನೀಡಿ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಧಡೇಸ್ಗೂರು ಗ್ರಾಪಂ ವ್ಯಾಪ್ತಿಯ ಉಪ್ಪಳ ಗ್ರಾಮದ ಕುಡಿಯುವ ನೀರಿಗಾಗಿ ಜಲ ನಿರ್ಮಲ ಯೋಜನೆಯಡಿ ರು. 86 ಲಕ್ಷ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗ್ರಾಮ ಸಭೆ ನಡೆಸದೆ ಅವ್ಯವಹಾರಕ್ಕೆ ಸಾಥ್ ನೀಡುವವರನ್ನು ಆಯ್ದು ಜಲ ನಿರ್ಮಲ ಯೋಜನೆ ಸಮಿತಿ ಸದಸ್ಯರೆಂದು ಠರಾವು ಪಾಸ್ ಮಾಡಲಾಗಿದೆ. ಯೋಜನೆ ಅಂದಾಜು ಪತ್ರಿಕೆಯಂತೆ ಕಳಪೆ ಪೈಪುಗಳನ್ನು ತಂದು ನಿಗದಿ ಪಡಿಸಿದ ಆಳಕ್ಕಿಂತ ಕಡಿಮೆ ಅಗೆದು ಹಾಕಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಜಲನಿರ್ಮಲ ಸಮಿತಿ ಆಡಳಿತ ಮಂಡಳಿ ಹಣ ದುರುಪಯೋಗ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿಯಮಾವಳಿ ಬಗ್ಗೆ ಕಿಂಚಿತ್ತು ಭಯವಿಲ್ಲದೆ ಸರ್ಕಾರಿ ನೌಕರನೆಂದು ಮರೆತು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ನೀಡುವುದಿಲ್ಲ. ಕೂಡಲೆ ಗ್ರಾಪಂಗೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಭೇರಗಿ, ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ, ರಾಘವೇಂದ್ರ ಉಪ್ಪಳ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಾಲೇಕಾರ್ ಅಮಾನತು
ರಾಯಚೂರು: ನಗರದ ಮಾರ್ಕೆಟ್ ಯಾರ್ಡ್ ಪಿಎಸ್‌ಐ ಬೇಬಿ ವಾಲೇಕಾರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸ್ನಳ್ಳಿ ಅವರು ಅಮಾನತುಗೊಳಿಸಿದ್ದಾರೆ.
ನಗರದ ಪರಿಮಳ ಬಾರ್‌ನಲ್ಲಿ ಕುಡಿದು ಗಲಾಟೆ ಮಾಡಿದ ಆರೋಪದಡಿ ಕಳೆದ 20 ದಿನಗಳ ಹಿಂದೆ ಗಲಾಟೆ ಮಾಡಿದ ಯುವಕರನ್ನು ಠಾಣೆಯಲ್ಲಿ ಥಳಿಸಿದ ಕುರಿತು ಮಾಧ್ಯಮಗಳಲ್ಲಿ ಪ್ರಸಾರಗೊಂಡ ಪರಿಣಾಮ ಘಟನೆಗೆ ಸಂಬಂಧಿಸಿ ರಾಜ್ಯ ಮಟ್ಟದ ಪೊಲೀಸ್ ಮೇಲಾಧಿಕಾರಿಗಳು ಹಾಗೂ ಮಾನವ ಹಕ್ಕು ಆಯೋಗದ ಅಧಿಕಾರಿಗಳು ಒತ್ತಡದ ಹಿನ್ನೆಲೆಯಲ್ಲಿ ಎಸ್‌ಪಿ ಬಿಸ್ನಳ್ಳಿ ಅವರು ಪಿಎಸ್‌ಐ ಬೇಬಿ ವಾಲೇಕಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.