ಲೈಂಗಿಕ ಆರೋಗ್ಯದಲ್ಲಿ ಗೊಂದಲ: ಉಷಾ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.14
ಇಂದಿನ ದಿನಮಾನಗಳಲ್ಲಿ ಪೌಷ್ಠಿಕ ಆಹಾರದ ಕೊರತೆ ಹಾಗೂ ಸಮಯಕ್ಕೆ ಸರಿಯಾಗಿ ಸಮತೋಲನ ಆಹಾರ ತೆಗೆದುಕೊಳ್ಳದ ಪರಿಣಾಮ ಯುವಕ, ಯುವತಿಯರು ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯದಲ್ಲಿ ಗೊಂದಲ ಉಂಟುಮಾಡುತ್ತದೆ ಎಂದು ಡಾ. ಉಷಾ ತಿಳಿಸಿದರು.
ನಗರದ ಕೆಇಬಿ ಪ್ರೌಢಶಾಲೆಯಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘದಿಂದ ಹಮ್ಮಿಕೊಂಡಿದ್ದ ಸಂತಾನೋತ್ಪತ್ತಿ ಹಾಗೂ ಲೈಂಗಿಕ ಆರೋಗ್ಯ ಸೇವೆಗಳ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೈಹಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗಳು ಹಂತ ಹಂತವಾಗಿ ಆಗುತ್ತಿರುವ ಪರಿಣಾಮ 10ರಿಂದ 19 ವರ್ಷ ವಯಸ್ಸಿನ ಯುವಕ, ಯುವತಿಯರು ಹೆಚ್ಚಿನ ಗೊಂದಲಕ್ಕೆ ಒಳಗಾಗುವ ಜೊತೆಗೆ ಸಿಟ್ಟಾಗುವುದು, ದೃತಿಗೆಡವುದು, ನಿರಾಶೆಗೊಳ್ಳುವುದು ಸಾಮಾನ್ಯ ಸಂಗತಿ.
ಅನುವಂಶಿಯತೆಯಿಂದ ಯುವಕ, ಯುವತಿಯರು ಸರಿಯಾದ ಪೌಷ್ಠಿಕ, ಸಮತೋಲನ ಆಹಾರ ಸೇವಿಸದೆ ವ್ಯಕ್ತಿಯ ಗಾತ್ರ, ತೂಕ, ಎತ್ತರದ ಕೊರತೆ ಕಾಣಬಹುದಾಗಿದೆ. ಋತುಚಕ್ರ, ಹೊಟ್ಟೆನೋವು, ಬಂಜೆತನಗಳಲ್ಲಿ ಪರಿಣಾಮ ಬೀರಲಿದ್ದು, ಇದನ್ನು ತಡೆಯಲು ಸರಿಯಾದ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಅವಶ್ಯ ಎಂದರು.
ಶಿಬಿರದಲ್ಲಿ ಎಫ್‌ಪಿಎಐ ಅಧ್ಯಕ್ಷ ಕೆ. ತಿಮ್ಮಯ್ಯ, ಉಪಾಧ್ಯಕ್ಷೆ ಲಲಿತಾ ಎಂ. ಸತ್ಯಕುಮಾರ, ಶಾಲಾ ಮುಖ್ಯಗುರು ಚಂದ್ರಕಾಂತ ಹವಾಲ್ದಾರ, ಕಾರ್ಯಕ್ರಮ ಅಧಿಕಾರಿಗಳಾದ ಭೀಮರಾಯ, ಪ್ರಸನ್ನ ವೆಂಕಟೇಶ, ಸ್ಮೃತಿ, ಶಿಕ್ಷಕಿಯರಾದ ಶಶಿಕಲಾ, ಗಂಗೂ ಹುಲಿಯಾಪುರ, ಶಶಿಕಲಾ ಹವಳದ, ರಾಜೇಶ್ವರಿ, ದಶರಥರಾವ್ ಇದ್ದರು.
--