ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಧರಣಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.15
ನೌಕರರಿಗೆ ಉದ್ಯೋಗ ಭದ್ರತೆ, ಖಾಲಿಯಿರುವ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಸೋಮವಾರ ನಗರದಲ್ಲಿ ಧರಣಿ ನಡೆಸಿದರು.
ಕ್ರಮಕ್ಕೆ ಆಗ್ರಹ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಉದ್ಯೋಗ ಭದ್ರತೆಯ ಅವಶ್ಯಕತೆಯಿದೆ. ರಾಯಚೂರು ತಾಲೂಕಿನ ಶಕ್ತಿನಗರದ ಲೇಬರ್ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿದ್ದ ಕಾರ್ಯಕರ್ತೆ ಅಶ್ರಫ್ ಅವರ ಸ್ಥಾನಕ್ಕೆ ದೇವದುರ್ಗದ ರಾಮಲಿಂಗಮ್ಮ ಅವರನ್ನು ನಿಯಮಬಾಹಿರವಾಗಿ ನೇಮಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಶ್ರಫ್ ಅವರನ್ನು ಪುನಾ ಅವರ ಮೊದಲಿನ ಸ್ಥಾನದಲ್ಲಿ ಮುಂದುವರಿಸಲು ಒತ್ತಾಯಿಸಿದರು.
ಅದೇ ರಾಯಚೂರು ತಾಲೂಕಿನ ತುರಕನಡೋಣಿ ಗ್ರಾಮದಲ್ಲಿ ಅಕ್ಷರ ದಾಸೋಹ ಬಿಸಿಯೂಟ ನೌಕರರನ್ನು ಗ್ರಾಮದ ಶಾಲೆಯ ಮುಖ್ಯಗುರುಗಳು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಅವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅನಗತ್ಯವಾಗಿ ಬಿಸಿಯೂಟ ನೌಕರರಿಗೆ ಕಿರುಕುಳ ನೀಡುತ್ತಿರುವ ಮುಖ್ಯಗುರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಖಾಲಿಯಿರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಕೂಡಲೇ ನೇಮಕಾತಿ ಮಾಡಬೇಕು. ಖಾಲಿಯಿರುವ ಗ್ರಾಪಂ ಕಾರ್ಯದರ್ಶಿ ಗ್ರೇಡ್-2 ಹುದ್ದೆಗ ಳಿಗೆ ಗ್ರಾಪಂ ಸಿಬ್ಬಂದಿಗೆ ಅನುಮೋದನೆ ಪಡೆದು ಪದೋನ್ನತಿ ನೀಡಬೇಕೆಂದು ಒತ್ತಾಯಿಸಿದರು.
ಶಿಕ್ಷಕರ ಹುದ್ದೆ ಭರ್ತಿ ಮಾಡಿ: ತಾಲೂಕಿನ ಯಾಪಲದಿನ್ನಿ, ಗುಂಜಳ್ಳಿಯಲ್ಲಿ ಖಾಲಿಯಿರುವ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಪಂಪ್ ಆಪರೇಟರ್ ಗಳನ್ನು ನೇಮಿಸುವಂತೆ ಒತ್ತಾಯಿಸಿದ ಕಾರ್ಯಕರ್ತರು, ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿದರು.
ಉನ್ನತ ಶ್ರೇಣಿಗೆ ಅರ್ಹವಾಗಿರುವ 316 ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಹೆಚ್ಚುವರಿ ಶಿಕ್ಷಕರೆಂದು ಗುರುತಿಸುವ ಪದ್ಧತಿ ಕೈಬಿಡಬೇಕು. ಎಸ್ಡಿಎಂಸಿಗಳ ಪುನಾರಚಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವ ಸೌದೆ ಹಾಗೂ ಬಾಡಿಗೆ ಹಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ವೇತನ ಪಾವತಿಸಿ: ಅಂಗನವಾಡಿ ಕೇಂದ್ರಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಬಾಡಿಗೆ ಹಾಗೂ ಸೌದೆ ಖರೀದಿಗೆ ಹಣವನ್ನು ಒದಗಿಸಬೇಕು. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಅಂಗನವಾಡಿ, ಬಿಸಿಯೂಟ ನೌಕರರು ಹಾಗೂ ಗ್ರಾಪಂ ನೌಕರರಿಗೆ ಆಯಾ ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಘಟನೆಯ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅನೇಕ ಸಂದರ್ಭದಲ್ಲಿ ಹೋರಾಟದ ಮೂಲಕ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯು ಉಗ್ರ ಸ್ವರೂಪದ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಪದ್ಮಾ, ತಾಲೂಕು ಸಮಿತಿ ಅಧ್ಯಕ್ಷ ವೀರಭದ್ರ, ಕಾರ್ಯದರ್ಶಿ ಶರಣಬಸವ, ಚನ್ನಬಸಯ್ಯ, ವರಲಕ್ಷ್ಮಿ, ಸಂಧ್ಯಾ, ಅಕ್ಕಮ್ಮ, ನಾಗಮ್ಮ, ಪ್ರವೀಣ ರೆಡ್ಡಿ, ಕೆ.ಜಿ. ವೀರೇಶ್ ಸೇರಿ ಅನೇಕರಿದ್ದರು.