ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗೊಬ್ಬರದ ಕೃತಕ ಅಭಾವ ಸೃಷ್ಟಿ: ಕ್ರಮಕ್ಕೆ ಆಗ್ರಹ

Lingaraj Badiger
Updated On : 16 Jul 2013, 10:58 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.15
ತಾಲೂಕಿನಲ್ಲಿ ರಸಗೊಬ್ಬರದ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಾಗೂ ಕಳಪೆ ಬೀಜ ಪೂರೈಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ರೈತರು ಸೋಮವಾರ ತಹಸೀಲ್ದಾರರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು.
ಕಳಪೆ ಬೀಜಗಳು: ಈ ಹಿಂದೆ ಕೃಷಿ ಸಚಿವರಾಗಿದ್ದ ಭೈರೇಗೌಡರು ರೈತ ಪರ ಚಿಂತನೆ ಮಾಡುವಲ್ಲಿ ಯಶಸ್ವಿಯಾಗಿ ಕೆಲಸ ಮಾಡುವ ಮೂಲಕ ರೈತರ ಪ್ರೀತಿಗೆ ಪಾತ್ರರಾಗಿದ್ದರು. ಅದರಂತೆ ತಾವು (ಕೃಷ್ಣ ಭೈರೇಗೌಡ) ಸಹ ಇಡೀ ಕೃಷಿ ಇಲಾಖೆಗೆ ಮರು ಜೀವ ಕಲ್ಪಿಸಬೇಕಿದೆ. ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡುವ ಕೃಷಿ ಸಲಕರಣೆಗಳು, ಬೀಜ ಮತ್ತು ಗೊಬ್ಬರ ಶೇ. 25ರಷ್ಟು ಸಹಾಯಧನ ರೈತರಿಗೆ ಮುಟ್ಟುತ್ತಿಲ್ಲ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಸಿದ ಬೀಜ ಕಳಪೆಯಿಂದ ಕೂಡಿವೆ ಮತ್ತು ಇದಕ್ಕೆ ರಸೀದಿ ಕೊಡುವುದಿಲ್ಲವೆಂದು ಆರೋಪಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹಾಗೂ ಕಳಪೆ ಬೀಜ ಮಾರಾಟ ಮಾಡುವ ವ್ಯಾಪಾರಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಪ್ರತಿ ಅಂಗಡಿಯಲ್ಲಿ ದಾಸ್ತಾನು ವಿವರ, ಬೀಜ, ಗೊಬ್ಬರದ ಬೆಲೆ ವಿವರ ಕಡ್ಡಾಯವಾಗಿ ಬರೆಯಬೇಕು. ಕೃಷಿ ಇಲಾಖೆ ಹಾಗೂ ವ್ಯಾಪಾರಸ್ಥರು ರೈತರು ಖರೀದಿಸಿದ ಬೀಜ, ಗೊಬ್ಬರ, ಕೃಷಿ ಸಲಕರಣೆಗಳಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು. ಸೇವಾ ಸಹಕಾರ ಸಂಘಗಳ ಮೂಲಕ ಗೊಬ್ಬರ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಳಪೆ ಆರೋಪ: ತಾಲೂಕಿನ ಗುರುಗುಂಟಾ ರೈತ ಸಂಪರ್ಕ ಕೇಂದ್ರದಲ್ಲಿ  ಗೌಡೂರು ಗ್ರಾಮದ ಕೆಲ ರೈತರು ಲಕ್ಷ್ಮೀ ಸೂರ್ಯಕಾಂತಿ ಪ್ರತಿ ಬೀಜದ ಪಾಕೀಟನ್ನು ರು. 630 ರಂತೆ ಖರೀದಿಸಿದ್ದು, ಸದರಿ ಬೀಜದ ಪಾಕೀಟು ಬಿಚ್ಚಿ ನೋಡಿದಾಗ ಬೀಜಗಳ ಮೇಲಿನ ತೊಗಟಿ ಇಲ್ಲದೆ ಸಂಪೂರ್ಣ ಕಳಪೆಯಿಂದ ಕೂಡಿರುವುದು ಕಂಡು ಬಂದಿತು. ಅಲ್ಲದೆ ಎಲ್ಲ ಕಂಪನಿಯ ಸೂರ್ಯಕಾಂತಿ, ಸಜ್ಜೆ, ತೊಗರಿ, ಹೆಸರು, ಕಡಲೆ, ಶೇಂಗಾ ಸೇರಿದಂತೆ ಇನ್ನಿತರೆ ಬೀಜಗಳು ಖರೀದಿಸಿದರೆ ರಶೀದಿ ಕೊಡುವುದಿಲ್ಲವೆಂದು ದೂರಿದರು.
ಈ ಕುರಿತು ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ಕಳಪೆ ಬೀಜ ಪೂರೈಸುವ ಮತ್ತು ಹೆಚ್ಚಿನ ಹಣ ಪಡೆಯುವ ಗುರುಗುಂಟಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮರೇಶ ಮಾರಲದಿನ್ನಿ, ಮುಖಂಡರಾದ ಸಂಗಣ್ಣ ಮುದಗಲ್, ಬಸನಗೌಡ, ಮಲ್ಲೇಶ, ರಾಮಣ್ಣ ಗೌಡೂರು, ಸಿದ್ರಾಮಯ್ಯ, ಅಮರೇಶ, ಹನುಮಂತ ಹೂಗಾರ, ಮುದಕಣ್ಣ, ಮುನಿಯಪ್ಪ ಗೌಡೂರು, ಸಿದ್ಧಯ್ಯಸ್ವಾಮಿ, ಸಿದ್ದೇಶ, ಬಸನಗೌಡ, ಚಂದ್ರಶೇಖರಯ್ಯ, ಸಾಹೇಬಗೌಡ, ಶಿವರಾಜ, ಆದಪ್ಪ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement