ಪಿಂಚಣಿದಾರರ ಅದಾಲತ್
ಮಸ್ಕಿ: ಸರ್ಕಾರದ ಆದೇಶದಂತೆ ಸ್ಥಳದಲ್ಲೇ ಪರಿಹಾರ ನೀಡುವ ಉದ್ದೇಶದಿಂದ ತಾಲೂಕಿನ ಎಲ್ಲೆಡೆ ಹೋಬಳಿ ಮಟ್ಟದ ಪಿಂಚಣಿದಾರರ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಹಾಯಕ ಆಯುಕ್ತ ಟಿ.ಯೋಗೀಶ್ ತಿಳಿಸದರು. ಅವರು ಪಟ್ಟಣದ ವಿಶೇಷ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪಿಂಚಣಿದಾರರ ಅದಾಲತ್ ನಲ್ಲಿ ಮಾತನಾಡಿ, ಅವಧಿ ಮುಗಿದ ಪಿಂಚಣಿದಾರರು ಮರು ಅರ್ಜಿ ಸಲ್ಲಿಸಬೇಕು. ಈ ಹಿಂದೆ ಪಿಂಚಣಿ ಪಡೆಯುತ್ತಿದ್ದವರು ಈಗ ಪಿಂಚಣಿ ನಿಲುಗಡೆಯಾಗಿದ್ದರೆ ಅದನ್ನು ಕಂದಾಯ ಅಧಿಕಾರಿಗಳು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸೂಕ್ತ ಸಮರ್ಪಕ ದಾಖಲೆಗಳನ್ನು ನೀಡಿದಲ್ಲಿ ನೋಂದಾಯಿಸಲಾಗುತ್ತದೆ ಎಂದರು. ಲಿಂಗಸ್ಗೂರು ತಹಸೀಲ್ದಾರ್ ಎನ್.ಬಿ. ಪಾಟೀಲ್, ಮಸ್ಕಿ ವಿಶೇಷ ತಹಶೀಲ್ದಾರ ಭಾನುಮತಿ, ಕಂದಾಯ ಅಧಿಕಾರಿ ನಾಗರಾಜ್, ಗ್ರಾಮಲೆಕ್ಕಾಧಿಕಾರಿ ರಾಘವೇಂದ್ರ ಮಂಡಲಿ ಮತ್ತಿತರರಿದ್ದರು.
ಚುನಾವಣಾಧಿಕಾರಿ ಬದಲಾವಣೆ
ರಾಯಚೂರು: ಜಿಲ್ಲೆಯಲ್ಲಿ ನಡೆಯಲಿರುವ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನೂತನ ಚುನಾವಣಾಧಿಕಾರಿಯಾಗಿ ಎಚ್. ಹುಸೇನಪ್ಪ ನೇಮಕಗೊಂಡಿದ್ದಾರೆ. ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಅವರು ಆದೇಶ ಹೊರಡಿಸಿದ್ದು, ಈ ಮೊದಲು ಚುನಾವಣಾಧಿಕಾರಿಯಾಗಿದ್ದ ಬಾಲಸ್ವಾಮಿ ಕೊಡ್ಲಿ ಅವರ ಬದಲಿಗೆ ಬೇರೊಬ್ಬರನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳು ಜು.12ರಂದು ಸೂಚಿಸಿದ ಹಿನ್ನೆಲೆಯಲ್ಲಿ ನೂತನ ಚುನಾವಣಾಧಿಕಾರಿಯಾಗಿ ಪಶು ವೈದ್ಯಕೀಯ ಪರೀಕ್ಷಕ ಎಚ್.ಹುಸೇನಪ್ಪ ಅವರನ್ನು ನೇಮಿಸಿದ್ದಾಗಿ ತಿಳಿಸಿದ್ದಾರೆ.
ಸೆ.16-17ರಂದು ಪೆನ್ಷನ್ ಅದಾಲತ್
ರಾಯಚೂರು: ಚೆನ್ನೈನ ಡಿಫೆನ್ಸ್ ಪೆನ್ಷನ್ ಕಚೇರಿಯ ಅಧಿಕಾರಿಗಳು ಸೆ.16-17ರಂದು ಬೆಳಗಾವಿಯಲ್ಲಿ ಡಿಫೆನ್ಸ್ ಪೆನ್ಷನ್ ಅದಾಲತ್ ಆಯೋಜಿಸಿದ್ದಾರೆ. ಮಾಜಿ ಸೈನಿಕರು ಪಿಂಚಣಿ ಪಡೆಯುವಲ್ಲಿ ಅಡಚಣೆಗಳಿದ್ದಲ್ಲಿ ಡಿಸ್ಚಾರ್ಜ್ ಬುಕ್, ಹಿಂದಿನ ಆರು ತಿಂಗಳ ಬ್ಯಾಂಕ್ ಪಾಸ್‌ಬುಕ್ ಪ್ರತಿಗಳನ್ನು ಇಂಗ್ಲೀಷ್‌ನಲ್ಲಿ ಬರೆದ ಅರ್ಜಿ ಜತೆ ಜು.31ರೊಳಗೆ ದಿ ಅದಾಲತ್ ಆಫೀಸರ್, ಆಫೀಸ್ ಆಫ್ ದ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್, ನಂ. 618, ಅಣ್ಣಾಸಲೈ, ಟೆಯನಂಪೇಟ್, ಚೆನೈ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ವಿವರಕ್ಕೆ ಗುಲ್ಬರ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯನ್ನು ಸಂಪರ್ಕಿಸಬಹುದು.