ಬಿಎಸ್ಸೆನ್ನೆಲ್ ಕಾರ್ಮಿಕರಿಂದ ನಾಳೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.15
ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕಳೆದ ಆರು ದಿನಗಳಿಂದ ಹೋರಾಟಕ್ಕಿಳಿದಿರುವ ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರು, ಶೀಘ್ರವೇ ಆಡಳಿತ ಮಂಡಳಿಯು ತಮ್ಮ ಬೇಡಿಕೆ ಈಡೇರಿಸದಿದ್ದರೆ, ಜು.17ರಂದು ಬಿಎಸ್ಸೆನ್ನೆಲ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದೆ.
ಈ ಕುರಿತು ಸೋಮವಾರ ಬಿಎಸ್ಸೆನ್ನೆಲ್ ಕ್ಯಾಶುವಲ್ ಮತ್ತು ಕಾಂಟ್ರಾಕ್ಟ್ ಕಾರ್ಮಿಕರ ಯೂನಿಯನ್ ಕಾರ್ಮಿಕರು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ಈಗಾಗಲೇ ಜು.10ರಿಂದ ಜಿಲ್ಲಾದ್ಯಂತ ವಿವಿಧ ತಾಲೂಕುಗಳಲ್ಲಿ ಕಾರ್ಮಿಕರು ಧರಣಿಯಲ್ಲಿದ್ದಾರೆ. ಆದರೆ ಸಂಸ್ಥೆಯ ಅಧಿಕಾರಿಗಳು ಬೇಡಿಕೆಯ ಈಡೇರಿಕೆ ಬಗ್ಗೆ ಗಮನಹರಿಸಿಲ್ಲ ಎಂದು ಆರೋಪಿಸಿದರು.
ಕನಿಷ್ಟ ವೇತನ ರು. 10ಸಾವಿರ ನಿಗದಿಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿರುವ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಸಂಸ್ಥೆ ಮೇಲಧಿಕಾರಿಗಳು ಕೂಡಲೇ ಗಮನಹರಿಸದಿದ್ದರೆ ಜು.17ರಂದು ನಗರದಲ್ಲಿರುವ ಸಂಸ್ಥೆಯ ಕಚೇರಿಗೆ ಗುತ್ತಿಗೆ ಕಾರ್ಮಿಕರೆಲ್ಲರೂ ಸೇರಿ ಮುತ್ತಿಗೆ ಹಾಕಲಿದ್ದಾರೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶೇಕ್ಷಾಖಾದ್ರಿ, ಉಪಾಧ್ಯಕ್ಷ ಗೌತಮ್ ಸೇರಿ ಅನೇಕರಿದ್ದರು.
--