ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸದಾಶಿವ ಆಯೋಗದ ವರದಿಗೆ ವಿರೋಧ

Lingaraj Badiger
Updated On : 16 Jul 2013, 10:58 am

ಮಸ್ಕಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಕೂಡಲೇ ವರದಿಯನ್ನು ತಿರಸ್ಕರಿಸುವಂತೆ ಮಸ್ಕಿ ವಿಧಾನ ಸಭಾ ಕ್ಷೇತ್ರದ ಸದಾಶಿವ ಆಯೋಗ ವರದಿ ವಿರೋಧಿ ಒಕ್ಕೂಟದ ಕಾರ್ಯಕರ್ತರು ಒತ್ತಾಯಿಸಿ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ಪಟ್ಟಣದ ಶ್ರೀಸಿದ್ದರಾಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಗ್ರಾಪಂ ಕಾರ್ಯಾಲಯ ತಲುಪಿ ಸಹಾಯಕ ಆಯುಕ್ತ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಪರಿಶಿಷ್ಟ ಜಾತಿಯ ಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಾಗೂ ಎಲ್ಲರಿಗೆ ಸಮಾನ ಸೌಲಭ್ಯಗಳು ಸಿಗುವಂತೆ ಮೀಸಲಾತಿ ಸೌಲಭ್ಯವನ್ನು ಈಗಾಗಲೇ ಸರ್ಕಾರಗಳು ಒದಗಿಸಿವೆ ಎಂದು ತಿಳಿಸಿದರು.
ಏಕಪಕ್ಷೀಯ: ಆದರೆ ಕರ್ನಾಟಕ ಸರ್ಕಾರ ಕೆಲ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಒಳಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ರಚಿಸಿದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ನೀಡಿರುವ ವರದಿಯಲ್ಲಿ ಕೇವಲ ಪರಿಶಿಷ್ಟ ಜಾತಿಯ ಎರಡು ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಹಾಗೂ ಏಕಪಕ್ಷೀಯ ವಿಚಾರಣೆ ಮಾಡಿ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ ಎಂದು ಆರೋಪಿಸಿದರು.
ಅನ್ಯಾಯ: ವರದಿ ಜಾರಿಯಾದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ 99 ಜಾತಿಯವರಿಗೆ ಸಾಮಾಜಿಕವಾಗಿ ದೊಡ್ಡ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಆಯೋಗದ ವರದಿ ತೀರಾ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಪರಿಶಿಷ್ಟ ಜಾತಿಗಳ ನಡುವೆ ದ್ವೇಷ ಹುಟ್ಟಿಸಿ ಸಾಮರಸ್ಯ ಹಾಳುಮಾಡುವಂತ ಹದಾಗಿದೆ. ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು. ಸಮಾಜದಲ್ಲಿ ಸಾಮರಸ್ಯ ಶಾಂತಿಯನ್ನು ಕೆಡಿಸುವಂಥ ಆಯೋಗಗಳ ರಚನೆಗೆ ಸರ್ಕಾರಗಳು ಮುಂದಾಗಬಾರದು ಎಂದು ಒತ್ತಾಯಿಸಿದರು.
ಈ ವೇಳೆ ವರದಿ ವಿರೋಧಿ ಒಕ್ಕೂಟದ ಸದಸ್ಯರಾದ ದುರುಗಪ್ಪ ಚಿಗರಿ, ದೇವಣ್ಣ ಜಾಧವ್, ಜೋಸೆಫ್ ಮೆದಿಕಿನಾಳ, ಸಾರಪ್ಪ ಬಂಗಾಲಿ, ಶೇಖರಪ್ಪ ಬೆಳಗಲ್, ಬಸವರಾಜ, ರವಿಕುಮಾರ ಚಿಗರಿ, ಮಲ್ಲಯ್ಯ, ಗ್ಯಾನಪ್ಪ ಕಂದಗಲ್, ಆಂಜನೇಯ್ಯ ಆನೆಹೊಸೂರು ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement