ಅಕ್ಕಿಗಾಗಿ ಸಾಲು...
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.16
ನಗರದ ವಾರ್ಡ್ ನಂ.14ರ ಆದರ್ಶ ಕಾಲೋನಿಯ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಗಾಗಿ ಕಳೆದೆರಡು ದಿನಗಳಿಂದ ಪಡಿತರದಾರರು ಸಾಲುಗಟ್ಟಿ ನಿಂತುಕೊಳ್ಳುವುದು ಸಾಮಾನ್ಯವಾಗಿದೆ. ಬೆಳಿಗ್ಗೆ 6ಕ್ಕೆ ಜನರು ನ್ಯಾಯಬೆಲೆ ಅಂಗಡಿ ಮುಂದೆ ಬಂದು ಕುಳಿತಿದ್ದರು. ಹಿಂದಿನ ದಿನ ಪಡಿತರ ಹಂಚುವಲ್ಲಿ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿತರಣೆಯನ್ನು ನಿಲ್ಲಿಸಲಾಗಿತ್ತು ಎಂದು ಅಕ್ಕಿಕೊಂಡುಕೊಳ್ಳಲು ಬಂದ ಮಹಿಳೆಯೊಬ್ಬರು ತಿಳಿಸಿದರು.
ನ್ಯಾಯಬೆಲೆ ಅಂಗಡಿ ಸಂಚಾಲಕರು ನಿಯಮದಂತೆ ತಿಂಗಳ ಪರ್ಯಂತ ಪಡಿತರವನ್ನು ವಿತರಣೆ ಮಾಡದೆ, ಎರಡ್ಮೂರು ದಿನ ಹಂಚಿ ಆನಂತರ ಅಂಗಡಿ ಬಂದ್ ಮಾಡುವುದನ್ನು ಮನಗಂಡಿರುವ ಪಡಿತರದಾರರು ಅಕ್ಕಿಯನ್ನು ಪಡೆಯಲು ತರಾತುರಿ ಮಾಡುತ್ತಿರುವುದರಿಂದ ದಿನದಿಂದ ದಿನಕ್ಕೆ ಸರದಿ ಸಾಲು ಹೆಚ್ಚುತ್ತಿದೆ ಎಂದು ಕಾರ್ಡಾದಾರರು ಅಳಲನ್ನು ತೊಡಿಕೊಂಡರು.
ಪಡಿತರದಾರರಿಗೆ ಸಾಮಾನ್ಯ ತಕ್ಕಡಿಯ ಮೂಲಕ ಅಕ್ಕಿಯನ್ನು ವಿತರಿಸುತ್ತಿರುವುದು ಕಂಡು ಬಂತು. ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ನ್ಯಾಯಬೆಲೆ ಅಂಗಡಿ ಸಂಚಾಲಕ ಮಹ್ಮದ್ ಅಲಿ ನಿರ್ಲಕ್ಷಿಸಿರುವ ಬಗ್ಗೆ ಪಡಿತರದಾರರಿಂದ ಅಸಮಾಧಾನ ವ್ಯಕ್ತವಾಯಿತು.