ಎಂಪಿಸಿಎಲ್ ಲಾಕ್ ಔಟ್: ಕಾರ್ಮಿಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.16
ತಾಲೂಕಿನ ಶಕ್ತಿನಗರದ ಬಳಿಯಿರುವ ಮೈಸೂರು ಪೆಟ್ರೋಕೆಮಿಕಲ್ಸ್ ನ ಘಟಕಕ್ಕೆ ಆಡಳಿತ ಮಂಡಳಿ ಲಾಕ್ ಔಟ್ ಘೋಷಿಸಿದ್ದು ಕಂಡು ಆಕ್ರೋಶಗೊಂಡ ಕಂಪನಿಯ ನೂರಾರು ಕಾರ್ಮಿಕರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಶಕ್ತಿನಗರದ ಬಳಿಯಿರುವ ಕಂಪನಿಯ ಘಟಕದ ಗೇಟ್ ಬಳಿ ಬೆಳಗ್ಗೆ ಜಮಾಯಿಸಿದ 120ಕ್ಕೂ ಹೆಚ್ಚಿನ ಕಾರ್ಮಿಕರು ಕಂಪನಿಯ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕಳೆದ 37ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯು 6-7 ವರ್ಷಗಳಿಂದ ನಷ್ಟದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಲಾಕ್ ಔಟ್ ಮಾಡಲಾಗಿತ್ತು. ಅದರಿಂದ ಕಾರ್ಮಿಕರು ಆತಂಕಕ್ಕೆ ಸಿಲುಕಿ ಪ್ರತಿಭಟನೆಗಿಳಿದರು. ಕಳೆದ ಮೂರು ತಿಂಗಳು ಹಿಂದೆಯೇ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಕಂಪನಿಯು, ಸಿಬ್ಬಂದಿಗೆ ವೇತನವನ್ನೂ ವಿತರಿಸಿರಲಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.
ಉತ್ಪಾದನೆ ಹೊರತುಪಡಿಸಿ ವಿವಿಧ ವಿಭಾಗಗಳಲ್ಲಿ ಕೆಲ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಮಂಗಳವಾರ ಬೆಳಗ್ಗೆ ಕಂಪನಿಯು ಸಂಪೂರ್ಣ ಮುಚ್ಚಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಏಪ್ರಿಲ್ ನಿಂದಲೇ ನಷ್ಟದ ನೆಪಮೊಡ್ಡಿ ಸಂಸ್ಥೆಯು ಉತ್ಪಾದನೆ ಸ್ಥಗಿತಗೊಳಿಸಿದೆ. ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಕಂಪನಿ ಮುಚ್ಚಲಾಗಿದೆ ಎಂದು ಕಾರ್ಮಿಕರು ಆರೋಪಿಸಿದರು.
ಹಿನ್ನೆಲೆ: ಮುಂಬೈ ಮೂಲದ ಕಂಪನಿಯ ಆಡಳಿತವು 1973ರಿಂದ ಶಕ್ತಿನಗರದ ಬಳಿ ಕಾರ್ಯ ನಿರ್ವಹಿಸುತ್ತಿದ್ದು, ಪೇಂಟ್, ಪ್ಲಾಸ್ಟಿಕ್ ಸೈಜರ್ಗೆ ಬಳಸುವ ಪ್ಯಾಥಲಿಕ್ ಎನ್ ಹೈಡ್ರೆಡ್ ಉತ್ಪಾದಿಸುತ್ತಿತ್ತು. ಜಿಲ್ಲೆಯಲ್ಲಿ ಕೆಮಿಕಲ್ ಉತ್ಪಾದಿಸುತ್ತಿದ್ದ ಈ ಕಂಪನಿಗೆ ರಾಜ್ಯ ಸರ್ಕಾರವು 110ಎಕರೆ ಜಮೀನು ಒದಗಿಸಿತ್ತು. ಜತೆಗೆ ಆರಂಭದಲ್ಲಿ ಐದು ವರ್ಷ ತೆರಿಗೆಯಿಂದ ರಿಯಾಯಿತಿ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ಎಚ್ಚರಿಕೆ: ಕಂಪನಿಯ ಆಡಳಿತ ಯಾವುದೇ ರೀತಿ ಮುನ್ಸೂಚನೆ ನೀಡದೇ ಮುಚ್ಚಿರುವುದು ಕಾರ್ಮಿಕರನ್ನು ಕೆರಳಿಸಿದ್ದು, ಆಡಳಿತ ಮಂಡಳಿಯ ಅಧಿಕಾರಿಯಾಗಿದ್ದ ಶಾಮಸುಂದರ್ ಘಟಕದಿಂದ ತಲೆಮರೆಸಿಕೊಂಡಿದ್ದಾರೆಂದು ಕಾರ್ಮಿಕರು ಆರೋಪಿಸಿದ್ದಾರೆ. ಕೂಡಲೇ ಕಂಪನಿಯ ಕೆಲಸ ಕಾರ್ಯ ಪುನಾ ಪ್ರಾರಂಭಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಾರ್ಮಿಕ ಮುಖಂಡರಾದ ಭೀಮಣ್ಣ, ಅಬ್ದುಲ್ ನಬಿಸಾಬ್, ಸುರೇಶ್ ಬಾಬು, ಮರಡಿಸಾಬ್, ಅಂಬರೇಶ್, ಬಾಷುಮಿಯಾ ಇದ್ದರು.
--