ಮಳೆಯಿಂದ ಉಪಕಾಲುವೆಗೆ ಹಾನಿ
ದೇವದುರ್ಗ: ತಾಲೂಕಿನ ವಗಡಂಬಳಿ ಬಳಿ ನಾರಾಯಣಪುರ ಬಲದಂಡೆ ಕಾಲುವೆಯ 15ನೇ ವಿತರಣೆ ಕಾಲುವೆಯ 14ನೇ ಉಪಕಾಲುವೆಗೆ ಈಚೆಗೆ ಸುರಿದ ಮಳೆಗೆ ಹಾನಿಯಾಗಿದೆ. ಗ್ರಾಮದ ಬಳಿಯ ಉಪಕಾಲುವೆಯಲ್ಲಿ ಮಳೆಯ ನೀರು ನುಗ್ಗಿದ್ದರಿಂದ ಕಾಲುವೆಯ ಭಾಗವು ಕೊಚ್ಚಿ ಹೋಗಿದ್ದು, ಘಟನಾ ಸ್ಥಳಕ್ಕೆ ರಾಜ್ಯ ರೈತ ಸಂಘದ ಶಿವನಗೌಡ ಮತ್ತು ಕಾರ್ಯಕರ್ತರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಕಾಲುವೆಯಲ್ಲಿ ಇನ್ನೂ ನೀರು ಹರಿಸಿಲ್ಲವಾದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ. ಕಾಲುವೆಯ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.
ಖರೀದಿಗೆ ಮುನ್ನ ಎಚ್ಚರಿಕೆಗೆ ಸೂಚನೆ
ರಾಯಚೂರು: ನಗರಸಭಾ ವ್ಯಾಪ್ತಿಯಲ್ಲಿರುವ ವಿವಿಧ ವಸತಿ ವಿನ್ಯಾಸಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಅಪಾರ್ಟ್ಮೆಂಟ್ಗಳಲ್ಲಿ ಕೆಲವು ಅಕ್ರಮವಾಗಿ ನಿರ್ಮಿಸಿದ್ದು, ಅಂಥ ಕಟ್ಟಡಗಳ ಬಗ್ಗೆ ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ನಗರಸಭೆಯ ಪರವಾನಿಗೆ ಹಾಗೂ ಆರ್ ಡಿಎ ಪರವಾನಿಗೆ ವಿರುದ್ಧ ಹಾಗೂ ಕರ್ನಾಟಕ ಪುರಸಭೆ ಮಾದರಿ ಕಟ್ಟಡಗಳ ನಿಯಮ 1979ರ ಷರತ್ತು ಉಲ್ಲಂಘಿಸಿ ನಿಯಮ ಉಲ್ಲಂಘಿಸಿ ನಿರ್ಮಿಸಿದ ಅನೇಕ ಕಟ್ಟಡಗಳನ್ನು ನಗರಸಭೆಯು ಪತ್ತೆ ಮಾಡಿದೆ. ಇಂಥ ಅಪಾಟ್ ಮೆಂಟ್ ಗಳಲ್ಲಿ ಮನೆ ಖರೀದಿಸುವ ವೇಳೆ ಜನತೆ ಎಚ್ಚರಿಕೆ ವಹಿಸಬೇಕು. ಖರೀದಿಸಿದಲ್ಲಿ ಅಂತಹವುಗಳ ವಿರುದ್ದ ಸರ್ಕಾರವು ಮುಂದಿನ ದಿನಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಂಡರೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸರ್ಕಾರ ಹೊಣೆಯಾಗದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಇಬ್ಬರು ಪೇದೆಗಳ ಅಮಾನತು
ಗುಲ್ಬರ್ಗ: ನಗರದ ಜಿಲ್ಲಾ ಆಸ್ಪತ್ರೆ ಬಳಿ ಈಚೇಗೆ ಒಬ್ಬ ವಿದ್ಯಾರ್ಥಿಯನ್ನು ಟ್ರಾಫಿಕ್ ಪೊಲೀಸ್ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆ ಪೇದೆ ಮಂಜುನಾಥಗೌಡ ಪಾಟೀಲ್ ಮತ್ತು ಅವರಿಗೆ ಸಹಕಾರ ನೀಡಿದರೆನ್ನಲಾದ ಅಬಕಾರಿ ಮತ್ತು ಲಾಟರಿ ಜಾರಿ ಜಾಗೃತದಳದ ಪೇದೆ ಆನಂದ ಎಂಬುವರನ್ನು ಅಮಾನತುಗೊಳಿಸಿದ್ದಾರೆ.
ಹಾವು ಕಚ್ಚಿ ವ್ಯಕ್ತಿ ಸಾವು
ಗುಲ್ಬರ್ಗ: ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಮರ್ತೂರ ಗ್ರಾಮದಲ್ಲಿ ನಡೆದಿದೆ. ಪರಶುರಾಮ ತಂದೆ ಶರಣಪ್ಪ ಉದಯಕರ್ (35) ಮೃತಪಟ್ಟ ದುರ್ದೈವಿ. ಹಾವು ಕಚ್ಚಿ ತೀವ್ರ ಅಸ್ವಸ್ಥನಾಗಿದ್ದ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--