ವಿದ್ಯಾರ್ಥಿಗಳು ರಾಷ್ಟ್ರಾಭಿಮಾನ ಮೈಗೂಡಿಸಿಕೊಳ್ಳಲು ಕರೆ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.16
ವಿದ್ಯಾರ್ಥಿಗಳು ರಾಷ್ಟ್ರಾಭಿಮಾನ ಮೈಗೂಡಿಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ ಎಂದು ಶೃಂಗೇರಿ ಪೀಠದ ಧರ್ಮಾಧಿಕಾರಿ ಭೀಮಸೇನರಾವ್ ಅಳವಂಡಿಕರ್ ಕರೆ ನೀಡಿದರು.
ಅವರು ತಾಲೂಕಿನ ಅಂಬಾಮಠ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ ದರ್ಶನ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಭಾರತ ದೇಶಕ್ಕೆ ಭಾರತ ಎಂಬ ನಾಮಕರಣದ ಹಿನ್ನೆಲೆ ರಾಮಾಯಣದ ಕೆಲ ಪ್ರಸಂಗಗಳು, ದೇಶಭಕ್ತರಾದ ಭಗತ್ ಸಿಂಗ್, ಸುಖದೇವ್, ರಾಜಗುರು ಇವರ ಮರಣದ ಕೆಲ ದೃಷ್ಟಾಂತಗಳು ಹಾಗೂ ರಾಷ್ಟ್ರಾಭಿಮಾನದ ಬಗ್ಗೆ ಉಪನ್ಯಾಸ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕ ಸಂಗಮೇಶ ವಹಿಸಿದ್ದರು. ನಾಗರಾಜ ಎಂ., ಪರಿಮಳ ದೇಶಪಾಂಡೆ, ಗೀತಾ ಪಾಟೀಲ್, ಮುಮ್ತಾಜ್ ಬೇಗಂ, ನಾಗರಾಜ ಶ್ರೇಷ್ಠಿ, ಶೀಲಾ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ(ಅಂಬಾದೇವಿ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್) ಅಂಬಾಮಠ ಇವರ ಆಶ್ರಯದಲ್ಲಿ ಅಂಬಾದೇವಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ವಸತಿ ನಿಲಯ ಹಾಗೂ ಅಂಬಾದೇವಿ ಹಿರಿಯ ಪ್ರಾಥಮಿಕ ಶಾಲೆ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಎಸ್.ಎ. ಈರಪ್ಪ ವಹಿಸಿದ್ದರು. ನಾಗರಾಜ, ಈರಮ್ಮ ಸಂಸ್ಥೆ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
--
ವರ್ತಕನಿಗೆ ಚಾಕುವಿನಿಂದ ಇರಿತ
ರಾಯಚೂರು: ಇಲ್ಲಿನ ವಾಸವಿನಗರದಲ್ಲಿ ಸೋಮವಾರ ರಾತ್ರಿ ಮನೆಗೆ ತೆರಳುತ್ತಿದ್ದ ಚಿನ್ನಾಭರಣ ವರ್ತಕರ ಮೇಲೆ ವ್ಯಕ್ತಿಗಳಿಬ್ಬರು ಚಾಕುವಿನಿಂದ ದಾಳಿ ಮಾಡಿದ ಘಟನೆ ನಡೆದಿದೆ.
ವಾಸವಿ ನಗರದ ನಿವಾಸಿ ಸಂಕೀರ್ತನ ಎಂಬುವವರು ಮನೆಗೆ ತೆರಳುತ್ತಿದ್ದ ವೇಳೆ ಮಾರ್ಗದಲ್ಲಿ ಬೈಕ್ ನಲ್ಲಿ ಧಾವಿಸಿದ ಇಬ್ಬರು ಅಪರಿಚಿತರು ಚಾಕುವಿನಿಂದ ಅವರ ಎಡ ಪಕ್ಕೆಗೆ ತಿವಿದು ಪರಾರಿಯಾಗಿದ್ದಾರೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.