ಪರಂಪರೆ ಬಗ್ಗೆ ಹೆಮ್ಮೆ ಇರಲಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.17
ಇಡೀ ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠ, ವಿಶಿಷ್ಠ ಸಂಸ್ಕೃತಿ ಹೊಂದಿರುವ ಭಾರತದ ಪರಂಪರೆಯ ಬಗ್ಗೆ ನಮಗೆ ಎಂದಿಗೂ ಹೆಮ್ಮೆ ಇರಬೇಕು. ಆ ಸಂಸ್ಕೃತಿಯನ್ನು ಜೀವನದ ಪ್ರತಿ ಹಂತದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂರಕ್ಷಿಸಬೇಕೆಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ವಿವೇಕಾನಂದರ 150ನೇ ವರ್ಷಾಚರಣೆಯ ಪ್ರಯುಕ್ತ ಆಗಮಿಸಿದ್ದ ರಥಯಾತ್ರೆಯ ನಿಮಿತ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ನಾನೊಬ್ಬ ಭಾರತೀಯನೆಂದು ಎದೆತಟ್ಟಿ ಹೇಳುವಂತಾಗಬೇಕು. ದೇಶದ ಬಗೆಗೆ ಯಾವುದೇ ಸಂಕುಚಿತ ಭಾವನೆ ನಮ್ಮಲ್ಲಿರಬಾರದು ಎಂದರು.
ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿ, ಭಾರತ ದೇಶದ ಯುವಜನಾಂಗಕ್ಕೆ ವಿವೇಕಾನಂದರು ಆದರ್ಶ ಪ್ರಾಯವಾಗಿದ್ದಾರೆ. ಅವರ 150ನೇ ಜಯಂತಿ ದೇಶಾದ್ಯಂತ ಆಚರಿಸುವಂತಾಗಬೇಕು ಎಂದರು.
ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ವಿವೇಕಾನಂದರು ಚಿಕ್ಯಾಗೊ ಭಾಷಣದ ಮೂಲಕ ಇಡೀ ಪ್ರಪಂಚವೇ ನಮ್ಮ ದೇಶದ ಕಡೆಗೆ ತಿರುಗಿ ನೋಡುವಂತೆ ಮಾಡಿದರು. ಅಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ನಾವೆಲ್ಲ ಅನುಕರಿಸಬೇಕೆಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರ್ ಲಜಾಟ್, ಕಸಾಪ ತಾಲೂಕು ಅಧ್ಯಕ್ಷೆ ರಾಮದೇವಿ ಶಂಭೋಜಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗೌತಮ್ಮೆಹ್ತಾ, ಬಿಜೆಪಿ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ನಗರಸಭೆ ಸದಸ್ಯ ಬಸವರಾಜ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ತ್ಯಾಗೀಶ್ವರಾನಂದ ಸ್ವಾಮೀಜಿ ಮಾತನಾಡಿದರು. ವೆಂಕಟೇಶ ಪ್ರಾರ್ಥಿಸಿದರು. ಈರೇಶ ಇಲ್ಲೂರು ಸ್ವಾಗತಿಸಿ, ಬೀರಪ್ಪ ಶಂಭೋಜಿ ನಿರೂಪಿಸಿ ವಂದಿಸಿದರು.