ಪ್ರವರ್ಗ-2ಎಗೆ ಆದಿಬಣಜಿಗರ ಸೇರ್ಪಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.17
ಎಸ್. ಸಿದ್ದಲಿಂಗಯ್ಯ ಆಯೋಗದ ವರದಿ ಜಾರಿ ಹಾಗೂ ಆದಿಬಣಜಿಗರನ್ನು ಪ್ರವರ್ಗ-2ಎಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಬುಧವಾರ ರಾಜ್ಯ ಆದಿಬಣಜಿಗರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಆದಿಬಣಜಿಗರ ಸಂಘವು ಕಳೆದ 15 ವರ್ಷಗಳಿಂದ ತಮ್ಮ ಜನಾಂಗದವರನ್ನು ಪ್ರವರ್ಗ-2ಎ ಅಡಿ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದು, ಆಡಳಿತರೂಢ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ಮಾಹಿತಿ: ಆದಿಬಣಜಿಗ ಜನಾಂಗಕ್ಕೆ 1500 ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದ ಕಾಲದ ಗೆಜೆಟ್ ಪ್ರತಿಗಳು, 30 ಜಿಲ್ಲೆಗಳಲ್ಲಿರುವ ಜನಾಂಗದ ಸಮಗ್ರ ಮಾಹಿತಿಯೊದಗಿಸಲಾಗಿದೆ. ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಜನಾಂಗದವರ ಹಿಂದುಳಿಯುವಿಕೆಯ ಬಗ್ಗೆಯೂ ಮಾಹಿತಿ ಸರ್ಕಾರಕ್ಕೆ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿ ಮುಖಾಮುಖಿ ಚರ್ಚೆ ಈ ಬಗ್ಗೆ ಹಿಂದೆಯೇ ನಡೆದಿದೆ. ಅಷ್ಟೇ ಅಲ್ಲ ಕಾನೂನಿನ ಚೌಕಟ್ಟಿನಲ್ಲಿಯೇ ಆದಿಬಣಜಿಗ ಜನಾಂಗದ ಸ್ಥಿತಿಗತಿ ಅಧ್ಯಯನಕ್ಕೆ ಎಸ್. ಸಿದ್ದಲಿಂಗಯ್ಯ ನೇತೃತ್ವದ ಆಯೋಗ ರಚನೆಯಾಗಿತ್ತು.
ಆಯೋಗ ಸಲಹೆ: ಆಯೋಗವು ರಾಜ್ಯಾದ್ಯಂತ ಸಮೀಕ್ಷೆ ನಡೆಸಿ, ಆದಿಬಣಜಿಗ ಸಮಾಜವು ಎಲ್ಲ ರಂಗಗಳಲ್ಲಿ ಹಿಂದುಳಿದಿದೆ. ಜನಾಂಗವನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಡಿ ಮೀಸಲಾತಿ ಕಲ್ಪಿಸುವಂತೆ ಆಯೋಗವು ಸಲಹೆ ನೀಡಿದೆ. 2005ರಲ್ಲಿಯೇ ಸರ್ಕಾರಕ್ಕೆ ಆಯೋಗ ವರದಿ ಸಲ್ಲಿಸಿದ್ದರೂ ಆಳುವ ಸರ್ಕಾರಗಳು ಇದುವರೆಗೆ ಆ ವರದಿ ಜಾರಿಗೆ ಆಸಕ್ತಿ ತೋರಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ 25 ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಆದಿಬಣಜಿಗರ ನಿರೀಕ್ಷೆಯನ್ನು ಸರ್ಕಾರ ಉಪೇಕ್ಷಿಸುತ್ತಲೇ ಸಾಗಿದೆ. ಆದಿಬಣಜಿಗರನ್ನು ಮುಂಬೈ ಕರ್ನಾಟಕದಲ್ಲಿ ವೀರಶೈವ ಆದಿಬಣಜಿಗರೆಂದು, ಮಹಾರಾಷ್ಟ್ರ ಗಡಿಭಾಗದಲ್ಲಿ ಚತುರ್ಥ ಲಿಂಗಾಯತರೆಂದು ಮತ್ತು ಹೈ.ಕ. ಭಾಗದಲ್ಲಿ ಆದಿ ವೀರಶೈವರೆಂದೂ ಕರೆಯಲಾಗುತ್ತದೆ. ಸಮಾಜದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಹೋರಾಟ ನಿರಂತರವಾಗಿ ಸಾಗಿದೆ. 2009ರಲ್ಲಿ ಆಗಿನ ಸರ್ಕಾರ ಕಾಟಾಚಾರಕ್ಕೆ ಪ್ರವರ್ಗ-2ಎ ಕ್ಕೆ ಸೇರಿಸಿ ನಂತರ ವಾಪಸು ಪಡೆಯಿತು ಎಂದು ದೂರಿದರು.
ಹೋರಾಟದ ಎಚ್ಚರಿಕೆ: ಆದಿಬಣಜಿಗರಿಗಿಂತ ಎಲ್ಲ ರೀತಿಯಿಂದ ಬಲಿಷ್ಠರಾಗಿರುವ ಗಾಣಿಗರು, ಒಕ್ಕಲಿಗರು, ಸಾದರು, ಬಣಜಿಗರ ಪಂಗಡಗಳಿಗೆ ಕೇಳಿದ್ದನು ನೀಡುವ ಧಾರಾಳತೆ ಪ್ರದರ್ಶಿಸಿದ ಸರ್ಕಾರಗಳು ಆದಿಬಣಜಿಗರಿಗೆ ಮಾತ್ರ ತಾರತಮ್ಯ ಮಾಡಿವೆ ಎಂದು ಆರೋಪಿಸಿದ ಕಾರ್ಯಕರ್ತರು, ಅತೀ ಶೀಘ್ರ ಎಸ್. ಸಿದ್ದಲಿಂಗಯ್ಯ ಆಯೋಗದ ವರದಿ ಜಾರಿಗೆ ಸರ್ಕಾರ ಕೂಡಲೇ ಮುಂದಾಗದಿದ್ದಲ್ಲಿ ಜನಾಂಗದವರು ಉಗ್ರ ಹೋರಾಟಕ್ಕಿಳಿಯಲಿದ್ದಾರೆಂದು ಎಚ್ಚರಿಸಿದರು. ರಾಜ್ಯದಲ್ಲಿ ಈಚೆಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಈ ಬಗ್ಗೆ ಕೂಡಲೇ ಗಮನಹರಿಸಬೇಕು. ಆದಿಬಣಜಿಗರನ್ನು ಪ್ರವರ್ಗ-2ಎ ಗೇ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸಂಘದವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಡಾ. ಬಸವಲಿಂಗಪ್ಪ ದಿವಟರ್, ಅಯ್ಯಪ್ಪ ತುಕ್ಕಾಯಿ, ವಿರೂಪಾಕ್ಷಪ್ಪ ದೇವದುರ್ಗ, ಹನುಮನಗೌಡ, ಉಮೇಶ್ವರಯ್ಯ ಬಿದನೂರಮಠ ಸೇರಿ ಅನೇಕರಿದ್ದರು.