ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರಿಂದ ಮುತ್ತಿಗೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.17
ಕನಿಷ್ಟ ವೇತನ ರು. 10ಸಾವಿರ ನಿಗದಿಗೆ ಆಗ್ರಹ, ಪಿಎಫ್ ಸೌಲಭ್ಯ ಸೇರಿ ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಧರಣಿ ನಡೆಸಿದ್ದ ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರು ಬುಧವಾರ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕ್ಯಾಷುವಲ್ ಮತ್ತು ಗುತ್ತಿಗೆ ಕಾರ್ಮಿಕರ ಯೂನಿಯನ್ ವತಿಯಿಂದ ಧರಣಿ ನಡೆಸಿದ್ದ ಕಾರ್ಮಿಕರು ಸಂಸ್ಥೆ ಮೇಲಧಿಕಾರಿಗಳು ತಮ್ಮ ಬೇಡಿಕೆ ಈಡೇರಿಸಲು ನಿರ್ಲಕ್ಷಿಸಿದ್ದರಿಂದ ಆಕ್ರೋಶಗೊಂಡು ಬುಧವಾರ ಮುತ್ತಿಗೆ ಹಾಕಿದ್ದರು.
ಈ ವೇಳೆ ಸಂಸ್ಥೆಯ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ, ಗುತ್ತಿಗೆ ಕಾರ್ಮಿಕರಿಗೆ ಪ್ರತ್ಯೇಕ ಪಿಎಫ್ ಖಾತೆ ಆರಂಭಿಸಬೇಕು. ಗುತ್ತಿಗೆ ಕಾರ್ಮಿಕರನ್ನು ಒದಗಿಸಿರುವ ಬೆಂಗಳೂರಿನ ಸ್ವಾಗತ್ ಅಸೋಸಿಯೇಟ್ಸ್ ಸಂಸ್ಥೆಯು ಗುತ್ತಿಗೆದಾರರಿಗೆ ನೀಡಬೇಕಾದ ರು. 16ಲಕ್ಷ ಬಾಕಿ ಪಿಎಫ್ ಹಣವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ತುಟ್ಟಿಭತ್ಯೆ ಪಾವತಿಸಿ: ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಯು ಕೇವಲ 1 ತಿಂಗಳ ಪಿಎಫ್ ಹಣವನ್ನು ಮಾತ್ರ ಪಾವತಿಸಿದ್ದು, ಬಾಕಿ ಹಣವನ್ನು ಕೂಡಲೇ ಪಾವತಿಸುವಂತೆ ಬಿಎಸ್ಸೆನ್ನೆಲ್ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಕಾರ್ಮಿಕರಿಗೆ ಆಯಾ ತಿಂಗಳ ವೇತನ ನಿಗದಿತ ದಿನಾಂಕದಂದು ಪಾವತಿಸಬೇಕು. ವೇತನ ವಿಳಂಬ ಮಾಡಬಾರದು. ಏಪ್ರಿಲ್, ಮೇ, ಜೂನ್ ತಿಂಗಳ ತುಟ್ಟಿಭತ್ಯೆಯನ್ನು ಪಾವತಿಸಬೇಕೆಂದು ಒತ್ತಾಯಿಸಿದರು.
ಕಾರ್ಮಿಕರಿಗೆ ವೇತನ, ಪಿಎಫ್ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ಕನಿಷ್ಟ ವೇತನವನ್ನು 10ಸಾವಿರ ರು. ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.
ಬೇಡಿಕೆ ಈಡೇರಿಸಿ: ಗುತ್ತಿಗೆ ಕಾರ್ಮಿಕರಿಗೆ ವಂಚಿಸುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೂಡಲೇ ಆಡಳಿತ ಮುಂದಾಗಬೇಕು. ಈ ಬಗ್ಗೆ ಹೋರಾಟಗಾರರಿಗೆ ಲಿಖಿತ ಭರವಸೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹೋರಾಟದ ನೇತೃತ್ವವನ್ನು ಶೇಕ್ಷಾಖಾದ್ರಿ ವಹಿಸಿದ್ದರು. ಪ್ರಮುಖರಾದ ವಿಠ್ಠಲ್, ಗೌತಮ್, ಮೃತ್ಯುಂಜಯ, ಪ್ರದೀಪ್, ವೆಂಕಟೇಶ್, ಶರಣಪ್ಪ, ಮಲ್ಲೇಶ, ಗುರುರಾಜ ಸೇರಿ ಅನೇಕರು ಪಾಲ್ಗೊಂಡಿದ್ದರು.