ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಭೂಪನಗೌಡ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.17
ಲಿಂಗಸ್ಗೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ಭುಪನಗೌಡ ಪಾಟೀಲ್ ಬಿರಾದಾರ ಅವರನ್ನು ಜು.12 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ನೇಮಕ ಮಾಡಿ ಆದೇಶ ಹೊರಡಿಸಿರುತ್ತಾರೆ.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕೂಡಲೇ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆಗೆ ಕಾರ್ಯೋನ್ಮುಖರಾಗುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರರ ಪಟ್ಟಣದ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಭೂಪನಗೌಡ ಪಾಟೀಲ್ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ನನ್ನನ್ನು ಲಿಂಗಸ್ಗೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುತ್ತಾರೆ.
ಪಕ್ಷ ಸಂಘಟನೆ: ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಎ. ವಸಂತ ಕುಮಾರ ಹಾಗೂ ಮಾಜಿ ಸಚಿವರಾದ ಎನ್.ಎಸ್. ಭೋಸರಾಜ, ಅಮರೇಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಪಕ್ಷದ ಶಾಸಕರು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆ ಸೂಚನೆ ಪಡೆದು ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಅಭ್ಯರ್ಥಿ ಗೆಲವಿಗೆ ಹಾಗೂ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭೂಪನಗೌಡ ಪಾಟೀಲ್ ಬಿರಾದಾರ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಕ್ಷದ ಕೆಪಿಸಿಸಿ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಮುದಗಲ್ ಬ್ಲಾಕ್ ಅಧ್ಯಕ್ಷ ಮುನ್ವರ್ ಖಾನ್, ಹಿರಿಯ ಮುಖಂಡರಾದ ಬಸವಂತರಾಯ ಕುರಿ, ಡಿ.ಎಸ್. ಹೂಲಗೇರಿ, ಗುರುಪಾದಪ್ಪ ಹೊನ್ನಳ್ಳಿ, ಲಾಲ ಅಹ್ಮದ್ ಸಾಬ್, ಗುಂಡಪ್ಪ ನಾಯಕ, ಖಾದರಪಾಶ, ಸೋಮಶೇಖರ ಐದನಾಳ, ಮಲ್ಲಣ್ಣ ವಾರದ, ಡಿ.ಜಿ. ಗುರಿಕಾರ, ಅನಿಸ್ ಪಾಶಾ, ಕುಮಾರ ಸ್ವಾಮಿ, ಎಂ.ಡಿ. ರಫಿ, ಚೆನ್ನಾರಡ್ಡಿ ಬಿರಾದಾರ, ಸಂಗಣ್ಣ ಬಯ್ಯಾಪುರ, ಪರಸಪ್ಪ ಹುನಕುಂಟಿ, ಮಾಧವ ನೆಲೋಗಿ ಸೇರಿದಂತೆ ಇನ್ನಿತರರು ಇದ್ದರು.