ರಾಣಾಪ್ರತಾಪ ಸಿಂಹ ಭಾವಚಿತ್ರ ಮೆರವಣಿಗೆ
ಮುದಗಲ್: ಪಟ್ಟಣದ ರಜಪೂತ ಸಮಾಜ ಬಾಂಧವರು ರಾಣಾಪ್ರತಾಪಸಿಂಹ ಅವರ ಜಯಂತಿಯನ್ನು ರಾಣಾಪ್ರತಾಪಸಿಂಹ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಐತಿಹಾಸಿಕ ಕಿಲ್ಲಾದ ಕೋಟೆಯೊಳಗಿನ ವೆಂಕಟೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನೀಲಕಂಠೇಶ್ವರ ದೇವಸ್ಥಾನದ ಮುಂದಿನ ಹನುಮಂತ ದೇವರ ದೇವಸ್ಥಾನದವರೆಗೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತದೊಂದಿಗೆ ಯುವಕರು ಘೋಷಣೆಗಳನ್ನು ಕೂಗುತ್ತ, ಕುಣಿದಾಡಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ರಜಪೂತ ಸಮಾಜ ಹಿರಿಯರಾದ ಭವಾನ್ ಸಿಂಗ್, ಉದಯಸಿಂಗ್ ಮುಖಂಡರಾದ ರಘುರಾಮಸಿಂಗ್ ನಗಾರಿ, ಭವಾನ್ ಸಿಂಗ್ ನಗಾರಿ, ಮಹಾವೀರ ಸಿಂಗ್, ಅಮರೇಶ ಸಿಂಗ್, ಬಾಬು ಸಿಂಗ್, ಠಾಕೂರ ಸಿಂಗ್, ಶಂಕರ ಸಿಂಗ್ ಸೇರಿದಂತೆ ಹಲವಾರು ಯುವಕರು ಭಾಗವಹಿಸಿದ್ದರು. ಜಯಂತಿ ಅಂಗವಾಗಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿಸಲಾಗಿತ್ತು. ಮೆರವಣಿಗೆ ನಂತರ ಸಮಾಜ ಬಾಂಧವರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.