ವಿಮೆ; ಎಫ್‌ಡಿಐ ಹೆಚ್ಚಳಕ್ಕೆ ವಿರೋಧ
ರಾಯಚೂರು: ವಿಮೆ ಉದ್ದಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿ ಹೆಚ್ಚಳಕ್ಕೆ ಅನುಮೋದನೆ ನೀಡಿರುವ ಕೇಂದ್ರ ಮಂತ್ರಿ ಮಂಡಳದ ನಿರ್ಧಾರ ಖಂಡಿಸಿ, ವಿಮಾ ನೌಕರರ ಸಂಘದ ಕಾರ್ಯಕರ್ತರು ಬುಧವಾರ ಇಲ್ಲಿನ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸ್ವಾವಲಂಬನೆಗೆ ಮಾರಕ: ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಘದ ಪದಾಧಿಕಾರಿಗಳು, ಕೇಂದ್ರ ಮಂತ್ರಿ ಮಂಡಲ ಸಭೆಯಲ್ಲಿ ವಿಮೆ, ರಕ್ಷಣಾ, ದೂರಸಂಚಾರ ಮುಂತಾದ ಹನ್ನೆರಡು ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಳಕ್ಕೆ ಅನುಮತಿಸಿರುವುದು ದುರದೃಷ್ಟಕರ ಸಂಗತಿ. ಅರವಿಂದ ಮಾಯಾರಾಮ್ ಸಮಿತಿ ಶಿಫಾರಸ್ಸಿನ ಆಧಾರದಲ್ಲಿ ದೇಶದ ಸೂಕ್ಷ್ಮ ಹಾಗೂ ಆಯಕಟ್ಟಿನ ವಲಯಗಳಾದ ರಕ್ಷಣಾ, ದೂರ ಸಂಚಾರ ಹಾಗೂ ವಿಮಾ ರಂಗಗಳಲ್ಲಿ ವಿದೇಶಿ ಬಂಡವಾಳ ಹಾಗೂ ಅವರ ಪಾಲುದಾರಿಕೆಯನ್ನು ಹೆಚ್ಚಿಸಲು ನಿರ್ಧರಿಸಿರುವ ಸರ್ಕಾರದ ಕ್ರಮ ದೇಶದ ಸುರಕ್ಷತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಮಾರಕವಾಗಲಿದೆ ಎಂದು ಆರೋಪಿಸಿದರು. ಯಾವುದೇ ರಂಗಕ್ಕೆ ವಿದೇಶಿ ಬಂಡವಾಳ ಹೂಡಿಕೆಗೆ ಮೊದಲು ವಿದೇಶಿ ಬಂಡವಾಳ ಪ್ರೋತ್ಸಾಹ ಮಂಡಳಿಯ ಅನುಮತಿಯ ಅವಶ್ಯಕತೆಯಿದೆ. ನಂತರದಲ್ಲಿ ಸಂಬಂಧಪಟ್ಟ ಇಲಾಖೆ, ನಿಯಂತ್ರಣ ಪ್ರಾಧಿಕಾರಗಳ ಅನುಮತಿ ಪಡೆಯಬೇಕು. ಆದರೆ ಮಂತ್ರಿಮಂಡಳದ ಸಭೆಯು ಅನುಮತಿಯಿಲ್ಲದೇ ನೇರ ಮಾರ್ಗದ ಮುಖಾಂತರ ವಿದೇಶಿ ಬಂಡವಾಳ ದೇಶಕ್ಕೆ ಆಗಮಿಸಲು ಅನುಮತಿ ನೀಡಿರುವುದು ವಿದೇಶಿ ಹಣಕಾಸು ಬಂಡವಾಳಶಾಹಿಗಳನ್ನು ತೃಪ್ತಿಪಡಿಸುವ ತಂತ್ರವಾಗಿದೆ ಎಂದು ದೂರಿದರು. ವಿಮಾ ಉದ್ದಿಮೆಯಲ್ಲಿ ಸದ್ಯ ಶೇ.26ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅನುಮತಿಯಿತ್ತು. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಶೇ.49ಕ್ಕೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.ಸರ್ಕಾರವು ಮುಂದಿನ ದಿನಗಳಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಿಸಿ ದೇಶೀಯ ಹಾಗೂ ವಿದೇಶಿಯ ಬಂಡವಾಳಶಾಹಿಗಳಿಗೆ ಸಮರ್ಪಿಸಲು ಮುಂದಾಗಿದೆ ಎಂದು ಹೋರಾಟಗಾರರು ಆರೋಪಿಸಿ ಕೇಂದ್ರದ ಈ ನಿರ್ಧಾರದ ವಿರುದ್ಧ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಲಾಯಿತು.
ಸೈಕಲ್‌ನಿಂದ ಬಿದ್ದು ವ್ಯಕ್ತಿ ಸಾವು
ರಾಯಚೂರು: ನಗರದ ಪೂರ್ಣಿಮಾ ಚಿತ್ರಮಂದಿರದ ಬಳಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ಸೈಕಲ್ ಚಲಾಯಿಸಿದ್ದರಿಂದ ಕೆಳಗೆ ಬಿದ್ದು ಪೆಟ್ಟಾಗಿ ಸಾವಿಗೀಡಾಗಿದ್ದಾನೆ. ಮೃತನನ್ನು ಶೇಖ್ ಹಮೀದ್ ಎಂದು ಗುರುತಿಸಲಾಗಿದೆ. ಈತ ಮನೆಯಿಂದ ಕೂಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೊರ ಹೋಗಿದ್ದು, ಮದ್ಯ ಸೇವಿಸಿ ಸೈಕಲ್ ಚಲಾಯಿಸುತ್ತಿದ್ದ. ಪೂರ್ಣಿಮಾ ಚಿತ್ರಮಂದಿರದ ಮುಂದಿನ ರಸ್ತೆಯಲ್ಲಿ ಸೈಕಲ್ ನಿಂದ ಕೆಳಗೆ ಬಿದ್ದಾಗ ಆತನ ತಲೆಗೆ ಪೆಟ್ಟಾಗಿದೆ. ಅದರಿಂದ ಗಂಭೀರ ಗಾಯಗೊಂಡ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.