ಎಂಪಿಸಿಎಲ್ ಪುನಾರಂಭಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.18
ಮೈಸೂರು ಪೆಟ್ರೋಕೆಮಿಕಲ್ಸ್ ಕಂಪನಿಯನ್ನು ಪುನಾರಂಭಿಸಲು ಸೂಚಿಸುವಂತೆ ಆಗ್ರಹಿಸಿ ಗುರುವಾರ ನಗರದಲ್ಲಿ ಕಂಪನಿಯ ನೂರಾರು ಕಾರ್ಮಿಕರು ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿದರು.
ನಗರದ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಕಾರ್ಯಕರ್ತರು, ತಾಲೂಕಿನ ಹೆಗ್ಗಸನಹಳ್ಳಿ ಬಳಿ ಎಂಪಿಸಿಎಲ್ ಕಾರ್ಖಾನೆಯು ಕಳೆದ 1973ರಿಂದ ಕಾರ್ಯನಿರ್ವಹಿಸುತ್ತಿದ್ದು, 40 ವರ್ಷಗಳಿಂದ ಈ ಭಾಗದ ಗ್ರಾಮಗಳ ನೂರಾರು ಕುಟುಂಬಗಳಿಗೆ ಜೀವನದ ಆಧಾರವಾಗಿತ್ತು. ಆದರೆ ಈಚೇಗೆ ಕಂಪನಿಯ ಆಡಳಿತ ಮಂಡಳಿಯು ದಿಢೀರ್ ಕಂಪನಿ ಮುಚ್ಚಿದ್ದು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ದೂರಿದರು.
ಮುನ್ಸೂಚನೆ ನೀಡದೇ ಲಾಕ್ಔಟ್: ಕಂಪನಿಯ ಆಡಳಿತ ವರ್ಗವು ಕಾರ್ಮಿಕ ವಿವಾದಗಳ ಕಾಯಿದೆ 1947ರಂತೆ ಕಾರ್ಯನಿರ್ವಹಿಸಿ ನಂತರದಲ್ಲಿ ಕಾರ್ಖಾನೆಯನ್ನು ಮುಚ್ಚುವ ಕಾರ್ಯ ಮಾಡಿಲ್ಲ. ಬದಲಿಗೆ ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೇ ಜು.16ರಂದು ಲಾಕ್ಔಟ್ ಘೋಷಿಸಿದ್ದು ಅನ್ಯಾಯ ಮಾಡಿದಂತಾಗಿದೆ ಎಂದು ಆರೋಪಿಸಿದರು.
ಎಂಪಿಸಿಎಲ್ ಕಾರ್ಖಾನೆಯ ಆಧುನೀಕರಣಕ್ಕೆ ಸ್ಥಳೀಯ ಸೌಲಭ್ಯಗಳ ಕೊರತೆಯಿದೆ. ಕಳೆದ ಐದು ವರ್ಷಗಳಿಂದ ಕಂಪನಿಯು ನಷ್ಟದಲ್ಲಿದೆ. ಕಾರ್ಖಾನೆಗೆ ಅವಶ್ಯಕವಾಗಿರುವ ಕಚ್ಚಾವಸ್ತುಗಳ ಕೊರತೆಯಿದೆ ಎಂದು ನೆಪವೊಡ್ಡಿ ಕಂಪನಿಯನ್ನು ಆಡಳಿತ ಮಂಡಳಿಯವರು ಮುಚ್ಚಿದ್ದಾರೆಂದು ದೂರಿದರು.
ಸಲ್ಲದ ಕಾರಣ ನೀಡಿಕೆ: ಎಂಪಿಸಿಎಲ್ ಕಂಪನಿಯ ಆಡಳಿತ ವರ್ಗವು ಹೆಗ್ಗಸನಹಳ್ಳಿ ಘಟಕದಿಂದ ದೊರೆತ ಲಾಭದಿಂದಲೇ ಬೇರೆ ರಾಜ್ಯಗಳಲ್ಲಿ ಅನೇಕ ಕಂಪನಿಗಳನ್ನು ಆರಂಭಿಸಿದೆ. ಆದರೆ ಸ್ಥಳೀಯ ಘಟಕ ಮುಚ್ಚಲು ಸಲ್ಲದ ಕಾರಣಮೊಡ್ಡಿ ಹೊಣೆಗಾರಿಕೆಯಿಂದ ಪಾರಾಗಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಕಾರ್ಖಾನೆಯ ಮುಚ್ಚುವಿಕೆ ಬಗ್ಗೆ ಕಂಪನಿಯ ಕಾರ್ಮಿಕರಿಗೆ ತಿಳಿಯದಂತೆ ಗೌಪ್ಯತೆ ವಹಿಸಲಾಗಿದೆ. ಕಾರ್ಮಿಕ ಸಂಘದವರಿಗೂ ಮುಚ್ಚುವಿಕೆಯ ಬಗ್ಗೆ ಮಾಹಿತಿ ಒದಗಿಸಿಲ್ಲ. ಕಾರ್ಖಾನೆಯನ್ನು ಮುಚ್ಚಿರುವ ರೀತಿಯು ಕಾನೂನುಬಾಹಿರವಾಗಿದೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕೂಡಲೇ ಕಂಪನಿಯ ಆಡಳಿತ ಮಂಡಳಿಗೆ ಎಂಪಿಸಿಎಲ್ ಕಾರ್ಖಾನೆ ಪುನಾರಂಭಿಸುವ ನಿಟ್ಟಿನಲ್ಲಿ ಸೂಚಿಸಬೇಕೆಂದು ಆಗ್ರಹಿಸಿದ ಹೋರಾಟಗಾರರು ಕುಟುಂಬದವರ ರಕ್ಷಣೆ ನಿಟ್ಟಿನಲ್ಲಿ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾತನಾಡಿ, ಸಂಬಂಧಿಸಿದ ಸಂಸ್ಥೆಯ ಆಡಳಿತ ವರ್ಗವನ್ನು ಸಂಪರ್ಕಿಸಿ ಕಾರ್ಖಾನೆಯ ಮುಚ್ಚುವಿಕೆ ಮತ್ತಿತರೆ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ತಿಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಶೇಕ್ಷಾಖಾದ್ರಿ, ಎಚ್.ಪದ್ಮಾ, ಡಿ.ಎಸ್. ಶರಣಬಸವ, ಶರಣಗೌಡ, ಎಂಪಿಸಿಎಲ್ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ, ಉಪಾಧ್ಯಕ್ಷ ಮಧುಕರ್, ಸುರೇಶ್ ಬಾಬು, ಅಬ್ದುಲ್ ನಬಿ, ಮರಡಿಸಾಬ್, ಬಾಷುಮಿಯಾ, ಅಂಬರೇಶ್ ಸೇರಿ ನೂರಾರು ಕಾರ್ಯಕರ್ತರಿದ್ದರು.