'ನಿವೇಶನ, ಪ್ರಾಧಿಕಾರಗಳ ಅನುಮತಿ ಅವಶ್ಯ'
ರಾಯಚೂರು: ಜಿಲ್ಲೆಯ ಎಲ್ಲ ನಗರ, ತಾಲೂಕು ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಭೂ ಮಾಲೀಕರು ವಸತಿ ಬಡಾವಣೆ ನಿರ್ಮಿಸಲು ನಿವೇಶನ ತಯಾರಿಸಲು ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿ ಪಡೆಯುವುದು ಅವಶ್ಯಕ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಡಳಿತವು, ನಿವೇಶನಗಳನ್ನು ಮಾರಾಟ ಮಾಡುವ ಉದ್ದೇಶಗಳಿಂದ ಕೃಷಿ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತಿಸಲು ಪ್ರಾಧಿಕಾರಿಗಳಿಂದ ಬಡಾವಣೆ ನಕಾಶೆ ಅನುಮೋದನೆ, ನಕಾಶೆ ಪ್ರಕಾರ ಚರಂಡಿ, ರಸ್ತೆ, ಉದ್ಯಾನವನಗಳ ಜಾಗೆ ಮೀಸಲಿರಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆಲ ಭೂ ಮಾಲಿಕರು ಬಿನ್ ಶೇತ್ಕಿ ಮಾಡಿಕೊಂಡು ನಂತರ ಪ್ರಾಧಿಕಾರದಿಂದ ಬಡಾವಣೆ ನಕಾಶೆ ಅನುಮೋದಿಸದಿರುವುದು, ನಕಾಶೆಯಂತೆ ನಿವೇಶನ ನಿರ್ಮಿಸದೇ, ಉದ್ಯಾನವನಕ್ಕೆ ಅವಕಾಶ ನೀಡದೇ ಕಾನೂನುಬಾಹಿರವಾಗಿ ನಿವೇಶನ ನಿರ್ಮಿಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಇಂತಹ ಬಡಾವಣೆಗಳ ಮಾಲಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರು ನಿವೇಶನಗಳನ್ನು ಖರೀದಿಸುವಾಗ ಪ್ರಾಧಿಕಾರಿಗಳ ಅನುಮೋದನೆ, ಬಡಾವಣೆ ನಕ್ಷೆಗಳ ಪ್ರಕಾರ ನಿವೇಶನ ನಿರ್ಮಿಸಲಾಗಿದೆಯೇ ಇಲ್ಲವೇ ಎಂಬುದನ್ನು ಅರಿತು ನಂತರದಲ್ಲಿ ನಿವೇಶನಗಳನ್ನು ಖರೀದಿಸಲು ಸೂಚಿಸಿದ್ದಾರೆ.
--
ಪಡಿತರ ಸೀಮೆಎಣ್ಣೆ ಬಿಡುಗಡೆ
ರಾಯಚೂರು: ಜಿಲ್ಲೆಯಲ್ಲಿ ಜುಲೈ ತಿಂಗಳಿನ ಬಿಪಿಎಲ್, ಎಪಿಎಲ್, ಗ್ಯಾಸ್ ಸಂಪರ್ಕ ಹೊಂದಿರದ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಬಿಡುಗಡೆಗೊಳಿಸಲಾಗಿದೆ. ಈ ಕುರಿತು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪ್ರಕಟಣೆ ನೀಡಿದ್ದು, ಪಡಿತರ ಪ್ರದೇಶ, ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೀಮೆ ಎಣ್ಣೆ ವಿತರಿಸಲು ನಿಗದಿಪಡಿಸಿದ ಪ್ರಮಾಣ ಐದು ಲೀಟರ್ ಆಗಿದೆ. ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಪ್ರತಿ ಲೀಟರ್‌ಗೆ 16.20, ಸಿಂಧನೂರಿಗೆ 16.30, ಮಾನವಿಗೆ 16.20 ಹಾಗೂ ದೇವದುರ್ಗದಲ್ಲಿ ಪ್ರತಿ ಲೀಟರಿಗೆ 15.90, ಲಿಂಗಸ್ಗೂರಲ್ಲಿ 16.10ರಂತೆ ವಿತರಿಸಲಾಗುತ್ತದೆ. ಜಿಲ್ಲೆಯ ಪಡಿತರ ಚೀಟಿದಾರರು ಜು. 25ರೊಳಗೆ ಸೀಮೆಎಣ್ಣೆ ಪಡೆಯಲು ಅವರು ತಿಳಿಸಿದ್ದಾರೆ.