ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಾಣರನ್ನೇ ಜಾಣರಾಗಿಸೋದು ಜಾಣತನವಲ್ಲ

Lingaraj Badiger
Updated On : 20 Jul 2013, 11:16 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.19
ಶಾಲಾ- ಕಾಲೇಜುಗಳಲ್ಲಿ ಜಾಣ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಅವರನ್ನು ಜಾಣರನ್ನಾಗಿ ಮಾಡುವುದು ಜಾಣತನವಲ್ಲ. ಅದರ ಬದಲಾಗಿ ಜಾಣತನದ ಅಂಚಿನಲ್ಲಿರುವವರನ್ನು ಜಾಣರನ್ನಾಗಿ ಮಾಡುವುದೇ ನಿಜವಾದ ಜಾಣತನವೆಂದು ಜವಳಗೇರಿಯ ನಿರಂತರ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಇಬ್ರಾಹಿಂ ಪಟೇಲ್ ಅಭಿಪ್ರಾಯಪಟ್ಟರು.
ತಾಲೂಕಿನ ಜವಳಗೇರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರ ಸ್ವಯಂ ಸೇವಾ ಸಂಸ್ಥೆಯವರು ಏರ್ಪಡಿಸಿದ್ದ ಪಿಯುಸಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ ಪಡೆದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಧನೆಗೆ ಪ್ರೋತ್ಸಾಹ ಅಗತ್ಯ: ಪಿಯುಸಿ ಪ್ರಥಮ ವರ್ಷದಲ್ಲಿ ದ್ವಿತೀಯ ಶ್ರೇಣಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬಹುಮಾನ ನೀಡಿದರೆ ಅವರು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಪತ್ರಕರ್ತ ಡಿ.ಎಚ್. ಕಂಬಳಿಯವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ನೈತಿಕತೆ ಹಾಗೂ ಗ್ರಾಮೀಣ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಬಗ್ಗೆ ವಿವರಿಸಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ನಶಿಸಿ ಹೋಗುವ ಜನಪದ ಸಾಹಿತ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳು ಬುದ್ಧಿವಂತರಾಗಿ, ವಿವೇಕತೆಯಿಂದ ಅಧ್ಯಯನ ಮಾಡಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಹೇಳಿ ಹಲವಾರು ಚುಟುಕುಗಳನ್ನು ವಾಚಿಸಿದರು.
ವಿತರಣೆ: ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ನೋಟ್ಬುಕ್ಗಳನ್ನು ವಿತರಿಸಲಾಯಿತು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉಷಾ ಅವರು ಪ್ರೋತ್ಸಾಹಧನ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜವಳಗೇರಾ ಸರ್ಕಾರಿ ಪದವಿ ಪೂರ್ವ ಕಾಲೆಜಿನ ಪ್ರಾಚಾರ್ಯ ಎಸ್.ಶಿವರಾಜ್ ವಹಿಸಿದ್ದರು. ಗುತ್ತೇದಾರ ಆರ್.ಎನ್. ಶ್ರೀಧರ, ಕೆ.ಶ್ರೀನಿವಾಸ್, ವೆಂಕಟೇಶ ಕರಾಬದಿನ್ನಿ, ಮಲ್ಲನಗೌಡ ಕೆ., ಬಸವರಾಜ ಎತ್ತಿನಮನಿ, ಶ್ರವಣಕುಮಾರ ಗಂಗಾವತಿ, ಉಪನ್ಯಾಸಕರಾದ ಬಸಲಿಂಗಯ್ಯ, ಇಂದುಮತಿ, ಶೀಲಾ ಡಿ.ಎನ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಹಂಪಮ್ಮ ಪ್ರಾರ್ಥಿಸಿದರು. ಉಪನ್ಯಾಸಕ ಡಾ. ನಾರಾಯಣ ಸ್ವಾಗತಿಸಿದರು. ಉಪನ್ಯಾಸಕ ಶಂಕ್ರಪ್ಪ ವಂದಿಸಿದರು. ಭೀಮಣ್ಣ ಜವಳಗೇರಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement