ಪ್ರವಾಸಿ ಟ್ಯಾಕ್ಸಿ ಯೋಜನೆ ಆಯ್ಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.19
ಪ್ರವಾಸೋದ್ಯಮ ಇಲಾಖೆಯು 2011- 12ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ಖರೀದಿಗೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಕಳೆದ 2012ರಲ್ಲಿ ಪ್ರವಾಸೋದ್ಯಮ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಸಹಾಯ ಧನದಲ್ಲಿ ಪ್ರವಾಸಿ ಟ್ಯಾಕ್ಸಿಯನ್ನು ಮಂಜೂರು ಮಾಡಲು ಅರ್ಜಿ ಕರೆದಿತ್ತು.
ಅರ್ಹ ನಿರುದ್ಯೋಗಿಗಳಿಂದ ಅರ್ಜಿ ಪಡೆದಿದ್ದ ಪ್ರವಾಸೋದ್ಯಮ ಇಲಾಖೆಯು 9 ತಿಂಗಳು ಕಳೆದರೂ ಇದುವರೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಸಂಬಂಧಿಸಿದ ಇಲಾಖೆಯ ಕಚೇರಿಯು ಜಿಲ್ಲೆಯಲ್ಲಿ ಮುಚ್ಚಿದ್ದು ಅದರಿಂದ ಯಾವುದೇ ಮಾಹಿತಿಯೂ ದೊರೆಯುತ್ತಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಕೂಡಲೇ ಯೋಜಡನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಚಾಲನೆ ನೀಡುವಂತೆ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿ ವಾರದೊಳಗೆ ಆಯ್ಕೆ ಕಾರ್ಯ ನಡೆಸದಿದ್ದರೆ, ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಚನ್ನಪ್ಪ, ಭೀಮರೆಡ್ಡಿ, ಡ್ಯಾನಿಯಲ್ ಕೊಲಿಮಿ, ಗವಿಸಿದ್ದ ಜಾಲ್ದಾರ್, ವಾಸು, ಗೋಪಾಲಕೃಷ್ಣ ಜಗ್ಲಿ, ತಿಮ್ಮಪ್ಪ ಮತ್ತಿತರರಿದ್ದರು.
ದಯಾನಂದ ಸ್ವಾಮಿ ಎಸ್ಡಿಎಂಸಿ ಅಧ್ಯಕ್ಷ
ಸಿಂಧನೂರು: ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ದಯಾನಂದ ಸ್ವಾಮಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾರೆಮ್ಮ ಛಲವಾದಿ, ಸದಸ್ಯರಾಗಿ ಸಿದ್ದನಗೌಡ ಮಾಲಿಪಾಟೀಲ್, ಪಂಪನಗೌಡ ಹಾಳಮನಿ, ಪಂಪಣ್ಣ ಹೊಸಮನಿ, ಶರಣಪ್ಪ ನಾಯಕ, ಪರಸಪ್ಪ ಚಳಗೇರಿ, ಶರಣಮ್ಮ ಕುಲ್ಕರ್ಣಿ, ಸರಸ್ವತಿ ನಾಯಕ, ಸರೋಜಮ್ಮ ಮಾಲಗಿತ್ತಿ, ಹುಲಿಗೆಮ್ಮ ಮಡಿವಾಳ, ನಿಂಗಮ್ಮ ಕುರುಬರ, ಖಾಜಾಸಾಬ್ ಮಹಿಬೂಬ್ಸಾಬ್ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಗ್ರಾಪಂ ಸದಸ್ಯರು, ಪಾಲಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.