ಶಾಲೆ ಆಡಳಿತದ ವಿರುದ್ಧ ಕ್ರಮಕ್ಕೆ ಆಗ್ರಹ
ರಾಯಚೂರು: ನಗರದ ಶ್ರೀಕನ್ಯಕಾ ಪರಮೇಶ್ವರಿ ಶಾಲಾ ಆಡಳಿತ ಮಂಡಳಿಯು ಕನ್ನಡ ಮಾಧ್ಯಮ ಶಾಲೆಗೆ ಸರ್ಕಾರದಿಂದ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಾಲೆಯನ್ನು ನಿರ್ವಹಿಸುತ್ತಿದೆ ಎಂದು ನವರತ್ನ ಯುವಕ ಸಂಘ ಆರೋಪಿಸಿದೆ.
ಈ ಕುರಿತು ಬಿಇಒ ಮಲ್ಲಿಕಾರ್ಜುನ ಅವರಿಗೆ ಈಚೆಗೆ ಮನವಿ ಸಲ್ಲಿಸಿ, ಶ್ರೀಕನ್ನಿಕಾ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ ಯನ್ನು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದೆ. 1ರಿಂದ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಗೆ ಅನುಮತಿ ಪಡೆದಿರುವ ಆಡಳಿತವು ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದೆ ಎಂದು ದೂರಿದರು. ಶಾಲೆಯಲ್ಲಿ ಮೂಲಸೌಲಭ್ಯಗಳಿಲ್ಲ. ವಿದ್ಯಾರ್ಥಿ ವೇತನವನ್ನೂ ಶಾಲೆಯ ಮಕ್ಕಳಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಆರ್. ಅಂಜಿನೆಯ್ಯ, ಅಧ್ಯಕ್ಷ ಹುಲಿಗೆಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಸೇರಿ ಅನೇಕರಿದ್ದರು.