ಗ್ರಾಮೀಣ ಅಭಿವೃದ್ಧಿಗೆ ಪೂರಕ ಬರವಣಿಗೆ ಅಗತ್ಯ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಜು.20
ದೇಶದ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿರುವ ಪತ್ರಿಕಾ ರಂಗ ಶಾಸಕಾಂಗ ಮತ್ತು ಕಾರ್ಯಾಂಗದ ಜೊತೆ ಅವಿನಾಭಾವ ಸಂಬಂಧ ಹೊಂದುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಪೂರಕ ಬರವಣಿಗೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಪತ್ರಕರ್ತ ಗಿರೀಶ್ರಾವ್ (ಜೋಗಿ)ಸಲಹೆ ನೀಡಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಒಳಆವರಣದಲ್ಲಿ ಶನಿವಾರ ಲಿಂಗಸ್ಗೂರು ಪ್ರೆಸ್ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ನಿಷ್ಠೂರ ಬರಹಗಳಿಂದ ಪತ್ರಕರ್ತರ ಮೇಲೆ ಜನಪ್ರತಿನಿಧಿಗಳ ನಂಬಿಕೆ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ. ಸಮಾಜವನ್ನು ತಿದ್ದಬಲ್ಲೆ ಎಂಬ ನಂಬಿಕೆ ಇರುವ ಪತ್ರಕರ್ತನನ್ನು ತಿದ್ದುವ ಶಕ್ತಿ ಓದುಗರಿಗಿದೆ. ದಿನವಿಡಿ ಸುದ್ದಿ ಸಂಗ್ರಹಕ್ಕಾಗಿ ಹೆಚ್ಚಿನ ಗಮನ ಹರಿಸುವ ಜೊತೆಗೆ ತಮ್ಮ ಕುಟುಂಬವನ್ನು ಸಂತೋಷವಾಗಿಡುವಲ್ಲಿ ಪತ್ರಕರ್ತರು ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಆತ್ಮಾವಲೋಕನವಾಗಲಿ: ಪತ್ರಿಕಾ ದಿನಾಚರಣೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕೇವಲ ಆಚರಣೆಗೆ ಸೀಮಿತಗೊಳ್ಳದೆ ಪತ್ರಕರ್ತರ ಆತ್ಮಾವಲೋಕನ ಕಾರ್ಯಕ್ರಮವಾಗಬೇಕು. ಸಮಾಜವನ್ನು ತಿದ್ದುವ ಅಥವಾ ಬದಲಾವಣೆ ತರುವ ಮುನ್ನ ಪತ್ರಕರ್ತರು ತಮ್ಮನ್ನು ತಾವು ಮೊದಲು ತಿದ್ದಿಕೊಳ್ಳಬೇಕು. ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಅಥವಾ ಅಭಿವೃದ್ಧಿ ಪೂರಕ ಚಿಂತನೆಗಳು ನಮ್ಮಲ್ಲಿ ಹುಟ್ಟಬೇಕು. ಸಮಾಜದಲ್ಲಿನ ಮೂಢನಂಬಿಕೆ ಹೊಗಲಾಡಿಸುವುದು, ಜಾತಿ ಪದ್ಧತಿ ನಿವಾರಣೆ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವ ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಶಾಸಕ ಡಾ. ಶಿವರಾಜ ಪಾಟೀಲ್, ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ, ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಟಿ. ಕಣಮಪ್ಪ, ಪ್ರೆಸ್ಕ್ಲಬ್ ಜಿಲ್ಲಾಧ್ಯಕ್ಷ ಭೀಮರಾಯ ಹದ್ದಿನಾಳ, ತಾಲೂಕು ಅಧ್ಯಕ್ಷ ಶಿವರಾಜ ಕೆಂಭಾವಿ, ಜಿಲ್ಲಾ ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಕಪಗಲ್, ದತ್ತು ಸರ್ಕಿಲ್ ಸೇರಿದಂತೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ರಾಯಚೂರು ಜಿಲ್ಲಾ ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಕಪಗಲ್, ದತ್ತು ಸರ್ಕಿಲ್, ದೇವದುರ್ಗ ಪತ್ರಕರ್ತ ಮೈನುದ್ದೀನ್ ಕಾಟಮಳ್ಳಿ, ಹಟ್ಟಿ ಪತ್ರಕರ್ತ ಕಾಶಿಂಅಲಿ, ಸಿಂಧನೂರು ಪತ್ರಕರ್ತ ಚಂದ್ರಶೇಖರ ಬೆನ್ನೂರು, ಕವಿತಾಳ ಪತ್ರಕರ್ತ ಗಂಗಪ್ಪ ದಿನ್ನಿ ಹಾಗೂ ಪತ್ರಿಕಾ ಏಜೆಂಟರಾದ ಚಂದ್ರುಗೌಡ ಹೊನ್ನಳ್ಳಿ, ಸಿದ್ದಪ್ಪ ಹಸಮಕಲ್, ಚಿನ್ನಪ್ಪ, ಮೌನೇಶ, ಸಂಗಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು.