ಚುನಾವಣೆ: ಡಿಸಿ ಆದೇಶ ಹಿಂದಕ್ಕೆ,ಆಯ್ಕೆ ಪ್ರಕ್ರಿಯೆ ಮುಂದುವರಿಕೆ
ಕ.ಪ್ರ. ವಾರ್ತೆ , ರಾಯಚೂರು , ಜು.20
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆ ನಿರ್ವಹಣೆಗೆ ಈಚೇಗೆ ಜಿಲ್ಲಾಧಿಕಾರಿ ಹೊರಡಿಸಿದ್ದ ಚುನಾವಣಾಧಿಕಾರಿಯ ನೇಮಕಾತಿ ಆದೇಶ ಹಿಂಪಡೆದಿದ್ದು, ಈ ಮೊದಲು ನಿರ್ಧರಿಸಿದಂತೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಮತ್ತು ಸಂಘದ ಕಾನೂನು ಸಲಹೆಗಾರ ಪದ್ಮವರ್ಧನ್ ವಕೀಲರು ತಿಳಿಸಿದರು.
ನಗರದಲ್ಲಿ ಶನಿವಾರ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೌಕರರ ಸಂಘದ ಚುನಾವಣೆಯ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ವಿವಿಧ ಇಲಾಖೆಗಳ 12 ಜನ ನೌಕರರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ರಿಟ್ ಅರ್ಜಿ ವಜಾಗೊಳಿಸಿದೆ ಎಂದು ಹೇಳಿದರು.
ಹಿಂಪಡೆದ ಆದೇಶ: ನ್ಯಾಯಾಲಯದಲ್ಲಿ ರಿಟ್ ವಜಾಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರದಿರುವುದರಿಂದ ಜಿಲ್ಲಾಧಿಕಾರಿ ಚುನಾವಣಾಧಿಕಾರಿ ನೇಮಿಸಿ ಆದೇಶ ಹೊರಡಿಸಿದ್ದರು. ಆದರೆ ಸದ್ಯ ಮತ್ತೊಂದು ಆದೇಶವನ್ನು ಹೊರಡಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ತಾವು ಈ ಮೊದಲು ಚುನಾವಣಾಧಿಕಾರಿ ನೇಮಿಸಿ ಹೊರಡಿಸಿದ್ದ ಆದೇಶ ಹಿಂಪಡೆದಿದ್ದಾರೆ. ಹೀಗಾಗಿ ಚುನಾವಣೆಯು ಪೂರ್ವ ನಿರ್ಧಾರದಂತೆ ನಡೆಯಲಿದೆ ಎಂದರು.
ಸರ್ಕಾರಿ ನೌಕರರ ಸಂಘದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಜಿಲ್ಲಾಡಳಿತ ಮತ್ತು ಸರ್ಕಾರಕ್ಕಿಲ್ಲ. ಈಗಾಗಲೇ 49 ಜನರು ಅವಿರೋಧ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಅಲ್ಲಗಳೆಯುವಂತಿಲ್ಲ ಎಂದ ಅವರು, ನ್ಯಾಯಾಲಯಕ್ಕೆ ಸಂಘದ ಚುನಾವಣೆ ವಿರುದ್ಧ ಮೊರೆ ಹೋಗಿದ್ದವರ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಷ್ಟೇ ಅಲ್ಲ ಸಂಘದ ಚುನಾವಣೆಯ ನಂತರದಲ್ಲಿ ಈ 12ಜನ ನೌಕರರ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಜಿಲ್ಲಾ ಸಂಘದ ಚುನಾವಣೆಯು ಈ ಮೊದಲು ನಿರ್ಧರಿಸಿದ ವೇಳಾಪಟ್ಟಿಯಂತೆಯೇ ನಡೆಯಲಿದೆ. ಈ ಬಗ್ಗೆ ಗೊಂದಲ ಬೇಡ ಎಂದರು.ಸಂಘದ ಪ್ರಮುಖರಾದ ಮಲ್ಲಿಕಾರ್ಜುನ, ನಾಗರಾಜ, ಆಲಂಬಾಷಾ, ಮಹೆಬೂಬ್ ಸಾಬ್, ಸೈಯದ್ ನಜೀರ್ ಅಹ್ಮದ್ ಸೇರಿ ಅನೇಕರಿದ್ದರು.