ಸಿಎಂ ಏಕಪಕ್ಷೀಯ ನಿರ್ಧಾರದಿಂದ ಗೊಂದಲ
ಕನ್ನಡಪ್ರಭ ವಾರ್ತೆ ರಾಯಚೂರು ಜು.20
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗರಿಗೆ ತಮ್ಮ ಪಕ್ಷದ ಸಿಎಂ ಎಂದು ಭಾಸವಾಗುತ್ತಿಲ್ಲ. ಅವರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವಿಕೆ ಹಾಗೂ ಪೂರ್ವ ಸಿದ್ಧತೆಯಿಲ್ಲದ ಯೋಜನೆಗಳ ಘೋಷಣೆಯಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಗೊಂದಲಕ್ಕೆ ದಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕಿಸಿದರು.
ನಗರದಲ್ಲಿ ಶನಿವಾರ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ ಅನ್ನಭಾಗ್ಯ ಯೋಜನೆ ಈಗಾಗಲೇ ಗೊಂದಲದ ಗೂಡಾಗಿದೆ. ಯಾವುದೇ ಪೂರ್ವ ಸಿದ್ಧತೆಗಳಿಲ್ಲದೇ ಆರಂಭಗೊಂಡ ಯೋಜನೆಗೆ ಮುಂದಿನ ದಿನಗಳಲ್ಲಿ ಅಕ್ಕಿಯ ಕೊರತೆಯಾಗಲಿದೆ ಎಂದು ದೂರಿದರು.
ಸರ್ಕಾರಕ್ಕೆ ಮಾಹಿತಿಯೇ ಇಲ್ಲ: ಸರ್ಕಾರದ ಬಳಿ ಅಕ್ಕಿಯ ಸಂಗ್ರಹಣೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರೂ ಬಿಪಿಎಲ್ ಪಡಿತರ ಕಾರ್ಡುದಾರರ ಸಂಖ್ಯೆಯಲ್ಲಿಯೂ ಸಾಕಷ್ಟು ವ್ಯತ್ಯಾಸವಿದೆ. ಅನೇಕ ಬಡವರ ಬಳಿ ಬಿಪಿಎಲ್ ಕಾರ್ಡಿಲ್ಲದ್ದರಿಂದ ಯೋಜನೆ ಲಾಭದಿಂದ ದೂರವೇ ಉಳಿದಿದ್ದಾರೆಂದು ಟೀಕಿಸಿದರು.
ಆಹಾರ ಭದ್ರತೆ ಚುನಾವಣೆ ಗಿಮಿಕ್: ಕೇಂದ್ರ ಸರ್ಕಾರ ದೇಶಕ್ಕೆ ಆಹಾರ ಭದ್ರತೆ ಒದಗಿಸುವ ಮಾತನಾಡುತ್ತಿದೆ. ಆದರೆ ಕೇಂದ್ರ ಸಹ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೇ ಯೋಜನೆ ಪ್ರಕಟಿಸಿದೆ. ಹಾಗಾಗಿ ರಾಜ್ಯದ ಅನ್ನಭಾಗ್ಯ ಯೋಜನೆ ಹಾಗೂ ಕೇಂದ್ರದ ಆಹಾರ ಭದ್ರತೆ ಕಾರ್ಯಕ್ರಮಗಳೆರಡೂ ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಗಿಮಿಕ್ ಅಷ್ಟೇ ಎಂದು ಲೇವಡಿ ಮಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆ ಪಕ್ಷದ ವರಿಷ್ಠರು ಸಮನ್ವಯ ಸಮಿತಿ ರಚಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮಧ್ಯೆ ಸಂಘರ್ಷ ನಡೆದಿದೆ. ಅದರಿಂದಾಗಿಯೇ ಸಿಎಂ ಸಿದ್ದರಾಮಯ್ಯ ಅವರು ಬಹುತೇಕ ಸಂದರ್ಭ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಆಗಸ್ಟ್‌ನಲ್ಲಿ ಹೋರಾಟ: ಕಳೆದ ಅವಧಿಗೆ ಬಿಜೆಪಿ ಸರ್ಕಾರ ಪ್ರಕಟಿಸಿದ್ದ ರಾಜ್ಯದ 43 ನೂತನ ತಾಲೂಕುಗಳ ಘೋಷಣೆಗೆ ಪ್ರಸಕ್ತ ಬಜೆಟ್‌ನಲ್ಲಿ ಕಾಂಗ್ರೆಸ್ ಯಾವುದೇ ರೀತಿಯ ಅವಕಾಶ ಕಲ್ಪಿಸಿಲ್ಲ. ಸರ್ಕಾರದ ಇಂಥ ಧೋರಣೆ ಖಂಡಿಸಿ ಆಗಸ್ಟ್‌ನಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಈಗಾಗಲೇ ಸಾಕಷ್ಟು ಪರಾಮರ್ಶೆ ನಡೆದಿದೆ. ಕಾರ್ಯಕರ್ತರು ಸೋಲಿನಿಂದ ಕಂಗೆಡದೇ ಮುಂಬರುವ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಿದೆ ಎಂದ ಅವರು, ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ಜನತೆಗೆ ತಿಳಿಸುವುದು ಹಾಗೂ ಎನ್‌ಡಿಎ ಮೈತ್ರಿಕೂಟದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವುದು ಕಾರ್ಯಕರ್ತರ ಕಾರ್ಯವಾಗಬೇಕೆಂದರು.
ಗೆಲ್ಲುವ ಗುರಿಯೊಂದಿಗೆ ಸಾಗಬೇಕು: ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ, ಬಿಜೆಪಿಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕಿದೆ. ಚುನಾವಣೆಯಲ್ಲಿ ಸೋಲು- ಗೆಲವು ತೀರಾ ಸಾಮಾನ್ಯ. ಆದರೆ ಮುಂದಿನ ಚುನಾವಣೆಗೆ ಗೆಲ್ಲಬೇಕೆಂಬ ಗುರಿಯೊಂದಿಗೆ ಸಾಗಬೇಕಿದೆ. ರಾಜಕೀಯ ಹಣ ಗಳಿಕೆಯ ಮಾರ್ಗವಲ್ಲ. ಸಮಾಜಕ್ಕೆ ಸೇವೆ ಸಲ್ಲಿಸಲು ಅವಕಾಶವಷ್ಟೇ ಎಂದು ಎಲ್ಲರೂ ಅರಿಯಬೇಕಿದೆ ಎಂದರು.
ಪಕ್ಷವು ತತ್ವ ಸಿದ್ಧಾಂತದ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾರ್ಯಕ್ರಮಗಳ ಜಾರಿ ಮೂಲಕ ಜನಮನ್ನಣೆ ಗಳಿಸಿದೆ. ಮುಂದಿನ ದಿನಗಳಲ್ಲಿಯೂ ಪಕ್ಷದ ಗೆಲುವು ನಿಶ್ಚಿತ ಕೊಪ್ಪಳ ಸಂಸದ ಶಿವರಾಮಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವಿನೊಂದಿಗೆ ದೇಶದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ಕಾಣುವುದು ಎಲ್ಲ ಕಾರ್ಯಕರ್ತರ ಗುರಿಯಾಗಬೇಕು ಎಂದರು. ಈ ಸಂದರ್ಭದಲ್ಲಿ ಎಂಎಲ್ಸಿ ಹಾಲಪ್ಪ ಆಚಾರ್, ಬಸನಗೌಡ ಬ್ಯಾಗವಾಟ್ ಮಾತನಾಡಿದರು.
ಅಧಿಕಾರ ಹಸ್ತಾಂತರ: ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಬಸನಗೌಡ ಬ್ಯಾಗವಾಟ್ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಪ್ರಮುಖರಾದ ತ್ರಿವಿಕ್ರಮ್ ಜೋಷಿ, ಅಶೋಕ ಗಸ್ತಿ, ಆರ್.ತಿಮ್ಮಯ್ಯ, ಬಂಡೇಶ್ ವಲ್ಕಂದಿನ್ನಿ, ನರಸಪ್ಪ ಯಕ್ಲಾಸಪುರ, ಕಡಗೋಲ ಆಂಜನೇಯ್ಯ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.