ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹ
ರಾಯಚೂರು: ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮತ್ತು ರಸ್ತಾರೋಕೋ ನಡೆಸಿದ ಸಂಘಟನೆ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಗರದ ಪ್ರಮುಖ ರಸ್ತೆಗಳಾದ ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದ ರಸ್ತೆ, ಬಸವನಬಾವಿ ವೃತ್ತದ ಸಂಪರ್ಕ ರಸ್ತೆ, ನೇತಾಜಿ ನಗರ ರಸ್ತೆ, ಕಂದಗಡ್ಡೆ ಮಾರೆಮ್ಮ ದೇವಸ್ಥಾನದ ಮುಂಭಾಗದ ರಸ್ತೆ ಸೇರಿ ನಗರದಲ್ಲಿನ ಅನೇಕ ರಸ್ತೆಗಳು ತೀರಾ ಹದಗೆಟ್ಟಿದ್ದು, ಅದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ರಸ್ತೆಗಳಲ್ಲಿ ವಾಹನ ಮತ್ತು ಪಾದಚಾರಿಗಳಿಗೆ ಸಂಚರಿಸುವುದು ಕಷ್ಟವಾಗಿದೆ. ಮಳೆ ಸುರಿದ ಸಂದರ್ಭದಲ್ಲಿ ಅಪಾಯಕಾರಿ ರೀತಿಯಲ್ಲಿ ರಸ್ತೆಗೆ ಮಳೆಯ ನೀರು ನುಗ್ಗುವುದರಿಂದ ಜನತೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಆ ಮೂಲಕ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್, ಖಲೀಲ್ ಪಾಷಾ, ರಘುವೀರ್ ನಾಯಕ, ಮಮ್ತಾಜುದ್ದೀನ್, ಮಲ್ಲಿಕಾರ್ಜುನ, ಸಂತೋಷ, ಜನಾರ್ದನ ರಾಜಲಬಂಡಾ, ಹುಸೇನಪ್ಪ ಸೇರಿ ಅನೇಕರಿದ್ದರು.