ಆರ್ಟಿಪಿಎಸ್ನ 4 ಘಟಕಗಳು ಸ್ಥಗಿತ
ರಾಯಚೂರು: ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಕುಸಿತ, ವಾರ್ಷಿಕ ದುರಸ್ತಿ ಮತ್ತು ತಾಂತ್ರಿಕ ದೋಷ ಸೇರಿದಂತೆ ವಿವಿಧ ಕಾರಣಗಳಿಗೆ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದ್ದರಿಂದ ವಿದ್ಯುತ್ಗೆ ಬೇಡಿಕೆ ಕುಸಿತವಾಗಿದ್ದರಿಂದ 4ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಕೇಂದ್ರದ 1ನೇ ಘಟಕವನ್ನು ವಾರ್ಷಿಕ ನಿರ್ವಹಣೆಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದಂತೆ 7 ಮತ್ತು 8ನೇ ಘಟಕಗಳು ತಾಂತ್ರಿಕ ದೋಷದಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ಸದ್ಯ ವಿದ್ಯುತ್ ಕೇಂದ್ರದಲ್ಲಿ 2, 3, 5 ಮತ್ತು 6ನೇ ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಭಾನುವಾರ ಬೆಳಗ್ಗೆವರೆಗೆ ಕೇಂದ್ರದಿಂದ ಒಟ್ಟು 860 ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ರವಾನೆಯಾಗಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.