ಚಾವಣಿ ಕುಸಿದು ಮಗುವಿಗೆ ಗಾಯ: ಪರಿಹಾರಕ್ಕೆ ಆಗ್ರಹ
ಸಿಂಧನೂರು: ತಾಲೂಕಿನ ನಂಜಲದಿನ್ನಿ ಗ್ರಾಮದ ಅಂಗನವಾಡಿ ಚಾವಣಿ ಕುಸಿದ ಪರಿಣಾಮವಾಗಿ ಗಾಯಗೊಂಡ ಮಗುವಿಗೆ ಪರಿಹಾರಧನ ಕೊಡಲು ನಿರ್ಲಕ್ಷಿಸುತ್ತಿರುವ ಅಧಿಕಾರಿಗಳ ವಿರುದ್ಧ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಹೈದ್ರಾಬಾದ್ ಕರ್ನಾಟಕ ದಲಿತ ರಕ್ಷಣಾ ಸಮಿತಿ ಎಚ್ಚರಿಸಿದೆ.
ಈ ಕುರಿತು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿರುವ ಸಮಿತಿಯ ತಾಲೂಕಾಧ್ಯಕ್ಷ ಶಾಮಪ್ಪ ಮೇರನಾಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಪರಾಪುರ ಅವರು ಜು.13ರಂದು ಈ ದುರ್ಘಟನೆ ಸಂಭವಿಸಿದೆ. 15 ಮಕ್ಕಳು ವಿದ್ಯಾಭ್ಯಾಸ ಮಾಡುವ ಈ ಕೋಣೆಯ ಚಾವಣಿ ಕುಸಿತದಿಂದಾಗಿ ಇಬ್ಬರು ಮಕ್ಕಳಿಗೆ ತೀವ್ರ ಗಾಯಗಳಾಗಿವೆ. ಒಂದು ಮಗುವಿನ ಕಾಲು ಮುರಿದಿದೆ. ಇಬ್ಬರನ್ನು ಮಸ್ಕಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದ್ದು ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಧರಣಿ ಎಚ್ಚರಕೆ: ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ತಂದಿದ್ದು, ಪರಿಹಾರಧನ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಸಿಡಿಪಿಒ ಕಚೇರಿಯ ಎದುರು ಜು. 22ರಂದು ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಒತ್ತಾಯ: ಅಂಗನವಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು, ಶಿಥಿಲ ಸ್ಥಿತಿಯಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಿ ಕಾಮಗಾರಿಗಳನ್ನು ಆರಂಭಿಸಬೇಕು. ನಿರ್ಲಕ್ಷ್ಯ ವಹಿಸಿದ ಸಿಡಿಪಿಒ ಅವರನ್ನು ಅಮಾನತುಗೊಳಿಸಬೇಕು. ಗಾಯಗೊಂಡ ಮಕ್ಕಳಿಗೆ ಕೂಡಲೇ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.