'ತಿಳಿವಳಿಕೆ ನೀಡಿ ಪಾಲಿಸಿ ತನ್ನಿ'
ಸಿಂಧನೂರು: ಎಲ್‌ಐಸಿ ಹೊಸ ವಿಮಾ ಪಾಲಿಸಿಗಳ ಮೇಲೆ ಮುಂಬರುವ ದಿನಗಳಲ್ಲಿ ಸೇವಾ ತೆರಿಗೆ ಬರುವ ಸಂಭವವಿದ್ದು ವಿಮಾ ಪ್ರತಿನಿಧಿಗಳು ತಮ್ಮ ಪಾಲಸಿದಾರರಿಗೆ ತಿಳಿವಳಿಕೆ ನೀಡಿ ಹೆಚ್ಚಿನ ಪಾಲಸಿಗಳನ್ನು ನೀಡುವಲ್ಲಿ ತೊಡಗಬೇಕೆಂದು ಲಿಯಾಫಿ ವಿಮಾ ಸಂಘಟನೆಯ ಅಧ್ಯಕ್ಷ ಕುಮಾರಸ್ವಾಮಿ ಸಲಹೆ ನೀಡಿದರು.
ನಗರದ ಯಲ್ಲಮ್ಮ ತೋಟದಲ್ಲಿ ಲೈಫ್ ಇನ್ಶೂರೆನಸ್ ಏಜೆಂಟ್ ಫೆಡರೇಷನ್ ಆಫ್ ಇಂಡಿಯಾದಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿನಿಧಿಗಳು ತಮ್ಮ ಪಾಲಸಿದಾರರಿಗೆ ಹೊಸ ಪಾಲಸಿಗಳನ್ನು ಗಮನಕ್ಕೆ ತರಬೇಕು. ಇದರಿಂದ ಹೆಚ್ಚಿನ ವಿಮಾ ಪಾಲಸಿಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದರು.
ಲಿಯಾಫಿ ಕಾರ್ಯದರ್ಶಿ ಉಮೇಶ ಪವಾರ ಮಾತನಾಡಿ, ಈಗಾಗಲೇ ಪ್ರತಿನಿಧಿತ್ವವವನ್ನು ಕಳೆದುಕೊಂಡವರು ಒಂದು ವರ್ಷದ ನಂತರ ಮರು ನೇಮಕ ಮಾಡುವ ತೀರ್ಮಾನ ಪ್ರಕ್ರಿಯೆ ಆರಂಭವಾಗಿದ್ದು, ಅಂತಹ ಪ್ರತಿನಿಧಿಗಳು ಲೈಸನ್ಸ್ ಶುಲ್ಕ ನೀಡಿ ಪ್ರತಿನಿಧಿತ್ವವನ್ನು ಪುನರ್ ನವೀಕರಣ ಮಾಡಬಹುದು. ಯಾವುದೇ ಕುಂದುಕೊರತೆಗಳು ಇದ್ದರೂ ಲಿಯಾಫಿಗೆ ತಿಳಿಸಿದರೆ ಅದಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ಸಂಘ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.
ಖಜಾಂಚಿ ಎನ್.ಶಿವ, ಏಜೆಂಟರಾದ ವಿ.ಗಿರಿಶರೆಡ್ಡಿ, ವೆಂಕಟೇಶ ಉದ್ಬಾಳ, ಪ್ರಸಾದ, ಕೆ.ನಬಿಸಾಬ, ಗುರುರಾಜ ಜಾಗೀರದಾರ, ಎಂ.ಕೆ.ಜಗ್ಗೆಶ, ಬಸವರಾಜ ಸೌದ್ರಿ, ಪ್ರಕಾಶ ಮಸ್ಕಿ ಸೇರಿದಂತೆ ಅನೇಕ ವಿಮಾ ಪ್ರತಿನಿಧಿಗಳು ಇದ್ದರು.