ದಲಿತರ ಮೇಲೆ ದೌರ್ಜನ್ಯ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.21
ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಜು.15ರಂದು ಬೆಳಗಿನ ಜಾವ ಮಾದಿಗರ ಕೇರಿಯಲ್ಲಿ ಕೆಲವು ಕುರುಬ ಜನಾಂಗದವರು ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾದಿಗ ಜನಾಂಗದವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿದ ತಾಲೂಕು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಘಟನೆಗೆ ಕಾರಣರಾದವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ತಾಲೂಕಾಧ್ಯಕ್ಷ ಆರ್.ಅಂಬ್ರೂಸ್, ಎಂಆರ್‌ಎಚ್‌ಎಸ್ ಜಿಲ್ಲಾ ಕಾರ್ಯದರ್ಶಿ ಆರೋಗ್ಯಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸುಭಾಷ ಫ್ರಾಂಕ್ಲಿನ್ ಮತ್ತಿತರರು, ಮಾದಿಗ ಜನಾಂಗದವರ ಮೇಲೆ ದೌರ್ಜನ್ಯವೆಸಗಿ ಮಹಿಳೆಯರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುವುದು ಹಾಗೂ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದಿದ್ದಾರೆ.
ರಕ್ಷಣೆಗೆ ಆಗ್ರಹ: ಮಾದಿಗರ ಕೇರಿಗೆ ನುಗ್ಗಿ ಕೊಡಲಿ, ಚಾಕು, ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರು ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಘಟನೆಗೆ ಕಾರಣರಾದವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪೊಲೀಸ್ ವೈಫಲ್ಯ ಕಾರಣ: ಚಿಕ್ಕಕಡಬೂರು ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆದಿರುವುದು ಪೊಲೀಸ್ ಮತ್ತು ಕಾನೂನು ವೈಫಲ್ಯದಿಂದಾಗಿ. ದಲಿತ ಮಹಿಳೆಯನ್ನು ಅವಮಾನಿಸಿದ ಘಟನೆಯೂ ದಲಿತರಿಗೆ ಸಾಮಾಜಿಕ ಮತ್ತು ಸರ್ಕಾರದ ರಕ್ಷಣೆ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ.
ಕೇವಲ 6 ದಲಿತ ಕುಟುಂಬಗಳಿರುವ ಈ ಗ್ರಾಮದಲ್ಲಿ ಬಲಿಷ್ಠ ರಾಜಕೀಯ ಬೆಂಬಲಿಗರು ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ. ಈ ದುರ್ಘಟನೆಗೆ ಕಾರಣರಾದವರನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕಾಧ್ಯಕ್ಷ ರಮೇಶ ಪಾಟೀಲ್ ಭೇರಗಿ, ಆರ್‌ವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ, ವೀರಭದ್ರಪ್ಪ ಮಲ್ಲಾಪುರ, ಜಿ. ಚೌರಪ್ಪ, ಒತ್ತಾಯಿಸಿದ್ದಾರೆ.