ಶೈಕ್ಷಣಿಕ ಪ್ರಗತಿಗೆ ಪತ್ರಿಕೆಗಳು ಒತ್ತು ನೀಡಲಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.21
ಪತ್ರಿಕೆಗಳು ಗ್ರಾಮೀಣ ಭಾಗದಲ್ಲಿನ ಸಾಕ್ಷರತೆಯ ಪ್ರಮಾಣ ಹೆಚ್ಚಳಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ. ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ರಾಜೀವಗಾಂಧಿ ಆರೋಗ್ಯ ವಿವಿ ಕುಲಸಚಿವ ಅಶೋಕಕುಮಾರ್ ಕರೆ ನೀಡಿದರು.
ನಗರದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪದಗ್ರಹಣ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಯುವಕರಲ್ಲಿ ಜಾಗೃತಿ ಕಾರ್ಯ ಅಗತ್ಯ: ದೇಶದ ಸಾಕ್ಷರತೆ ಪ್ರಮಾಣ ಶೇ.60ರ ಆಸುಪಾಸಿನಲ್ಲಿದೆ. ಅದನ್ನು ಶೇ.100ರ ಎತ್ತರಕ್ಕೆ ಕೊಂಡೊಯ್ಯುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಪತ್ರಿಕಾ ರಂಗ ಮಹತ್ವದ ಪಾತ್ರ ವಹಿಸುವುದು ಅವಶ್ಯ. ಪತ್ರಿಕೆಗಳು ಗ್ರಾಮೀಣ ಭಾಗದತ್ತ ಹೆಚ್ಚಿನ ಆಸಕ್ತಿ ತೋರಬೇಕಿದೆ. ಆಗ ಮಾತ್ರ ಸುಧಾರಣೆ ಸಾಧ್ಯ ಎಂದರು.
ದೇಶದ ಒಟ್ಟು ಜನಸಂಖ್ಯೆಯ ಶೇ.52ರಷ್ಟು ಯುವಕರಿದ್ದಾರೆ. ಇಂದಿನ ದಿನಮಾನದಲ್ಲಿ ತಂತ್ರಜ್ಞಾನದ ಬಳಕೆ ಎಲ್ಲ ರಂಗಗಳಲ್ಲಿ ವ್ಯಾಪಿಸಿದ್ದು, ಯುವಕರು ತಂತ್ರಜ್ಞಾನದ ಅರಿವು ಹೊಂದುವುದು ಅವಶ್ಯ. ದೇಶದ ಎಲ್ಲ ಯುವಕರು ತಂತ್ರಜ್ಞಾನವನ್ನು ಅರಿತು ಪ್ರಗತಿ ಸಾಧಿಸುವಂತಾಗಬೇಕು. ಅದಕ್ಕೆ ಪತ್ರಿಕಾ ರಂಗ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದರು.
ಪತ್ರಿಕಾ ರಂಗ ಸಾಕಷ್ಟು ಪ್ರಗತಿ ಕಂಡಿದ್ದು, ಜತೆಗೆ ಉದ್ಯಮವಾಗಿಯೂ ಬೆಳೆದಿದೆ. ಪತ್ರಿಕಾ ರಂಗವು ಉದ್ಯಮ ಆಗಬಾರದು ಎಂದು ಹೇಳುತ್ತಲೇ ಉದ್ದಿಮೆಯಾಗಿದೆ. ಸದ್ಯ ಪ್ರತಿ ವರ್ಷ ಈ ಉದ್ಯಮದಲ್ಲಿ 32 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.
ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಹತ್ತು ಹಲವು ಸಂಕಷ್ಟಗಳನ್ನು ಎದುರಿಸಿ ಬೆಳೆದು ನಿಂತಿವೆ. ಪತ್ರಿಕೆಗಳಿಗೆ ರಕ್ಷಣೆ ಇಲ್ಲವಾಗಿದೆ. ಪತ್ರಕರ್ತರೇ ಪತ್ರಿಕೆಗಳಿಗೆ ಬೆನ್ನೆಲುಬಾಗಿ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಹೋರಾಟದ ಮೂಲಕವೇ ಎಲ್ಲವನ್ನೂ ಪಡೆಯುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಕಿವಿ ಹಿಂಡುವ ಕೆಲಸ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಡಳಿತರೂಢರು ಹಾಗೂ ವಿರೋಧ ಪಕ್ಷದವರ ಕಿವಿಹಿಂಡುವ ಮೂಲಕ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಮುನ್ನಡೆಸುವ ಕಾರ್ಯವನ್ನು ಪತ್ರಿಕಾರಂಗ ಮಾಡುತ್ತದೆ ಎಂದು ಹೇಳಿದರು.
ಗ್ರಾಮೀಣ ಶಾಸಕ ತಿಪ್ಪರಾಜು, ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮಾತನಾಡಿ, ಪತ್ರಕರ್ತರ ಸಂಘ ಮತ್ತು ರಿಪೋರ್ಟರ್ಸ್ ಗಿಲ್ಡ್‌ನ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಜಿಪಂ ಅಧ್ಯಕ್ಷೆ ಲಲಿತಮ್ಮ, ಶಾಸಕರಾದ ವೆಂಕಟೇಶ ನಾಯಕ, ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಸುರೇಂದ್ರಾಚಾರ್ಯ ಕೊರ್ತಕುಂದಾ, ಗೌರವಾಧ್ಯಕ್ಷ ಕೆ. ರಾಮಕೃಷ್ಣ, ಕಾರ್ಯದರ್ಶಿ ಕೆ. ಸತ್ಯನಾರಾಯಣ, ಸಂಘದ ರಾಜ್ಯ ಕಾರ್ಯದರ್ಶಿ ವೆಂಕಟಸಿಂಗ್ ಸೇರಿ ಅನೇಕರಿದ್ದರು. ಈ ವೇಳೆ ವತ್ರಕರ್ತರ ಸಂಘ ಹಾಗೂ ರಿಪೋರ್ಟರ್ಸ್ ಗಿಲ್ಡ್‌ನಿಂದ ವಾರ್ಷಿಕ ಪ್ರಶಸ್ತಿಗಳನ್ನು ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಜನತೆ ಪಾಲ್ಗೊಂಡಿದ್ದರು.