ದೌರ್ಜನ್ಯಕ್ಕೆ ಖಂಡನೆ: 31ರಂದು ದಲಿತ ಸಂಘಟನೆಗಳ ಚಳವಳಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.22
ತಾಲೂಕಿನ ಗಾಣದಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಗಡಿಪಾರು ಮಾಡಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವ ಇಡಪನೂರು ಠಾಣೆಯ ಪಿಎಸ್ಸೈ ಅಮಾನತಿಗೆ ಆಗ್ರಹಿಸಿ ಜು.31ರಂದು ಗಾಣದಾಳ ಚಲೋ ಚಳವಳಿ ಆಯೋಜಿಸಲಾಗಿದೆ.
ನಗರದಲ್ಲಿ ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ರವೀಂದ್ರನಾಥ ಪಟ್ಟಿ, ಅಂಬಣ್ಣ ಅರೋಲಿ ಜಂಟಿಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಗಾಣದಾಳ ಗ್ರಾಮದಲ್ಲಿ ಕೆಲ ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆನಂತರ ಅಪ್ರಾಪ್ತೆಯ ತಾಯಿಗೆ ಅಪಮಾನಿಸಿ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರಿದರು.
ಭಯದ ಬದುಕು: ಗ್ರಾಮದ ಚಿನ್ನಿರಂಗಳ ಚಿನ್ನಿ ಹಾಗೂ ತಲಾರಿ ಅಂಜಿನೆಯ್ಯ ಈ ದುಷ್ಕೃತ್ಯ ಎಸಗಿದ್ದು, ದಲಿತ ಕಾರ್ಯಕರ್ತರಾದ ನಲ್ಲಣ್ಣ, ಹರವಿ ಬಸವರಾಜ ಇನ್ನಿತರರನ್ನು ಕರೆಯಿಸಿ ಜೀವ ಬೆದರಿಕೆ ಹಾಕಿದ್ದರಿಂದ ಗ್ರಾಮದಲ್ಲಿರುವ ದಲಿತರು ಭಯದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆಂದು ಆರೋಪಿಸಿದರು.
ದಲಿತರ ಮೇಲಿನ ದೌರ್ಜನ್ಯ ತಡೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಮತ್ತು ಗ್ರಾಮದ ದಲಿತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಜು.31ರಂದು ಗಾಣದಾಳ ಚಲೋ ಚಳವಳಿ ಆಯೋಜಿಸಲಾಗಿದೆ. ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ತಾಳಿದ್ದು, ಕೂಡಲೇ ಎಚ್ಚೆತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಲ್ಕಿತ್ತ ತಹಸೀಲ್ದಾರ್: ಕಳೆದ ವರ್ಷ ನ.21ರಂದು ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ನಂತರ ಆಕೆಯ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಪ್ರಕರಣ ಇಡಪನೂರು ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಜಾಮೀನು ಪಡೆದಿದ್ದಾರೆ. ಆರೋಪಿ ತಲಾರಿ ಅಂಜಿನೆಯ್ಯ ಗ್ರಾಮ ಸಹಾಯಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನನ್ನು ಆ ಹುದ್ದೆಯಿಂದ ತೆಗೆದು ಹಾಕಿ ಬೇರೆಯವರನ್ನು ನೇಮಿಸಲು ಗ್ರಾಮಸಭೆ ಜು.3ಕ್ಕೆ ತಹಸೀಲ್ದಾರ್ ಸಮ್ಮುಖದಲ್ಲಿ ಕರೆಯಲಾಗಿತ್ತು. ಸಭೆಗೆ ಆಗಮಿಸಿದ್ದ ನೊಂದ ಬಾಲಕಿಯ ತಾಯಿ ಮಾಣಿಕ್ಯಮ್ಮ, ಅಣ್ಣ ಜಯಪಾಲ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ತಲಾರಿ ಆಂಜಿನೇಯ್ಯ ಮತ್ತಿತರರ ಜತೆ ಜಗಳ ನಡೆದಿದ್ದು, ತಹಸೀಲ್ದಾರ್ ಈ ವೇಳೆ ಅಲ್ಲಿಂದ ಕಾಲ್ಕಿತ್ತಿದ್ದಾರೆಂದು ಆರೋಪಿಸಿದರು.
ಪರಿಸ್ಥಿತಿ ನಿಯಂತ್ರಿಸಬೇಕಾದ ತಹಸೀಲ್ದಾರರು ಅಲ್ಲಿಂದ ಮರಳಿದ್ದು ಗ್ರಾಮಸಭೆಗೆಂದು ಆಗಮಿಸಿದ್ದವರ ಮುಂದೆಯೇ ಮಾಣಿಕ್ಯಮ್ಮಳನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು, ಆರೋಪಿಗಳ ಜತೆ ಇಡಪನೂರು ಠಾಣೆ ಪಿಎಸ್ಸೈ ಸಹ ಘಟನೆಗೆ ಕಾರಣರಾಗಿದ್ದಾರೆಂದು ದೂರಿದರು.
ಪ್ರಚೋದನೆ: ಗ್ರಾಮದ ಪ್ರಹ್ಲಾದ ಆಚಾರಿ, ಕಾವಲಿ ನರಸಯ್ಯ, ಗುರುಸ್ವಾಮಿ ಅಲಿಯಾಸ್ ಬೊಡ್ಡೊಳ್ಳಯ್ಯ ಆಟೋ ಗುರುಸ್ವಾಮಿ, ಸಿ. ಮಲ್ಲೇಶನಾಯಕ, ಗುರಗೋಳ ರಾಮಕೃಷ್ಣ ಅವರು ಘಟನೆಗೆ ಪ್ರಚೋದಿಸಿದ್ದಾರೆ. ಕ್ಷೇತ್ರದ ಶಾಸಕರು ತಮ್ಮ ಸಂಬಂಧಿ ಎಂದು ಹೇಳುತ್ತಲೇ ಆರೋಪಿಗಳು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆಂದು ಆರೋಪಿಸಿದರು. ಕೂಡಲೇ ಆರೋಪಿಗಳಿಗೆ ನ್ಯಾಯಾಲಯ ನೀಡಿರುವ ಷರತ್ತು ಬದ್ಧ ಜಾಮೀನು ರದ್ದುಪಡಿಸಬೇಕು. ಗೂಂಡಾ ಕಾಯಿದೆ ಅಡಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು. ಪ್ರಚೋದನೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಡಪನೂರು ಪಿಎಸ್ಸೈಐ ಅಮಾನತುಗೊಳಿಸಬೇಕು. ಗ್ರಾಮದಲ್ಲಿ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಹಾಗೂ ನೊಂದವರಿಗೆ ಪರಿಹಾರ ನೀಡಬೇಕೆಂದು ಮುಖಂಡರು ಆಗ್ರಹಿಸಿದರು.
ಈ ಸಂದರ್ಭ ಒಕ್ಕೂಟದ ಮುಖಂಡರಾದ ಜೆ.ಬಿ.ರಾಜು, ಎಂ.ಆರ್. ಭೇರಿ, ಬಸವರಾಜ ಹರವಿ, ಶಂಕರ ಚಲುವಾದಿ, ಹನುಮಂತ ಗುಂಜಳ್ಳಿ ಮತ್ತಿತರರಿದ್ದರು.
ಆರೋಪಿ ಬಂಧನಕ್ಕೆ ದಸಂಸ ಮನವಿ
ರಾಯಚೂರು: ಸಿಂಧನೂರು ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕು. ದಲಿತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಒತ್ತಾಯಿಸಿದೆ.
ಸಮಿತಿಯ ಕಾರ್ಯಕರ್ತರು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಗ್ರಾಮದಲ್ಲಿ ಸಿಂಧನೂರು ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ದಲಿತರ ಮೇಲೆ ಗ್ರಾಮದ ಸವರ್ಣೀಯರು ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆಂದು ದೂರಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮದಲ್ಲಿ ದಲಿತರು ಭಯದ ವಾತಾವರಣದಲ್ಲಿ ಜೀವನ ನಡೆಸಿದ್ದಾರೆ. ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಕಿರುಕುಳ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಗ್ರಾಮದಲ್ಲಿ ತೊಂದರೆಗೆ ಸಿಲುಕಿರುವ ದಲಿತರಿಗೆ ರಕ್ಷಣೆ ಒದಗಿಸಬೇಕು. ಹಲ್ಲೆ ಮಾಡಿದವರನ್ನು ಬಂಧಿಸಬೇಕು. ಬಹಿಷ್ಕಾರ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಎಂ.ಆರ್. ಭೇರಿ, ರಾಜ್ಯ ಸಂಚಾಲಕ ರವೀಂದ್ರನಾಥ ಪಟ್ಟಿ, ಶರಣಪ್ಪ ದಿನ್ನಿ, ಹನುಮಂತ ಅರೋಲಿ ಮತ್ತಿತರರಿದ್ದರು.