ರಾಷ್ಟ್ರಾಭಿಮಾನ ಮೂಡಿಸಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.22
ದೇಶದಲ್ಲಿ ಜಾತಿ ಮತ ಪಂಥಗಳ ಬೇಧ ಮರೆತು ಎಲ್ಲರೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳುವ ಅವಶ್ಯಕತೆಯಿದೆ ಎಂದು ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ಸುಭಾಷರೆಡ್ಡಿ ಪಾಟೀಲ್ ಕರೆ ನೀಡಿದರು.
ಅವರು ನಗರದಲ್ಲಿ ಈಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ಮಿಲಾಪ್ ಶಿಬಿರವನ್ನು ಉದ್ಘಾಟಿಸಿ, ಸೇವಾದಳವು ವಿದ್ಯಾರ್ಥಿಗಳಲ್ಲಿ ಸೇವೆ ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಮಹಾನ್ ಕಾರ್ಯ ಮಾಡುತ್ತಿದೆ. ಪ್ರತಿ ಶಿಕ್ಷಕರೂ ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತೆ, ದೇಶಪ್ರೇಮ ಬಗ್ಗೆ ಬೋಧಿಸುವ ಅವಶ್ಯಕತೆಯಿದೆ ಎಂದರು.
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಮೂಲಕ ಜ್ಞಾನವೃದ್ಧಿ ಕಾರ್ಯ ಆಗಬೇಕಿದೆ. ಯೋಗ, ದೈಹಿಕ ಚಟುವಟಿಕೆಗಳ ಮೂಲಕ ಮಕ್ಕಳ ಆರೋಗ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಭಾರತ ಸೇವಾ ದಳದ ತರಬೇತಿ ಪಡೆದ ಶಿಕ್ಷಕರು ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದರು.
ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಬೋರೆಡ್ಡಿ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿ ಭಾರತ ಸೇವಾದಳದ ಘಟಕ ಆರಂಭಿಸಬೇಕು. ಮಕ್ಕಳಿಗೆ ರಾಷ್ಟ್ರೀಯ ಗೀತೆ ಹಾಗೂ ಸೇವಾದಳ ಗೀತೆಗಳು ಕಲಿಸುವ ಕಾರ್ಯ ಮಾಡುವಂತೆ ಮನವಿ ಮಾಡಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ವಿನೋದಕುಮಾರ್, ಶಾಲೆಯ ಮುಖ್ಯಗುರು ಪ್ರಭಾವತಿ, ಸೇವಾದಳದ ಜಿಲ್ಲಾ ಸಂಘಟಕ ವಿದ್ಯಾಸಾಗರ ಚಿಣಮಗೇರಿ ಉಪಸ್ಥಿತರಿದ್ದರು. ತರಬೇತಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ 57 ಜನ ಶಿಕ್ಷಕರು ಪಾಲ್ಗೊಂಡಿದ್ದರು.
--