'ಆಪ್ತ ಸಹಾಯಕ ಹುದ್ದೆಯಿಂದ ಮುಕ್ತಗೊಳಿಸಿ'
ಕನ್ನಡಪ್ರಭ ವಾರ್ತೆ, ರಾಯಚೂರು, ಜು.23
ಹೈಕೋರ್ಟ್ ಆದೇಶವನ್ನು ಮರೆಮಾಚಿ ಜಿಲ್ಲಾಧಿಕಾರಿಗಳಿಂದ ನ್ಯಾಯಾಲಯ ನಿಂದನೆಯಾಗುವಂತಹ ಆದೇಶ ಹೊರಡಿಸಲು ಕಾರಣರಾದ ಕಳಂಕಿತ ನೌಕರ ಡಿ.ವೆಂಕಟೇಶ ಅವರನ್ನು ತಮ್ಮ ಆಪ್ತ ಸಹಾಯಕ ಹುದ್ದೆಯಿಂದ ಮುಕ್ತಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೆಬೂಬ ಬಾಷಾ ಮೂಲಿಮನಿ ಅವರು ಶಾಸಕ ಶಿವರಾಜ ಪಾಟೀಲರಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ 2013-18ರ ಅವಧಿಯ ಜಾರಿಯಲ್ಲಿರುವ ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಮಾಡದೆ ಮುಂದುವರಿಸಿದ್ದನ್ನು ಗ್ರಹಿಸಿಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಡಿ.ವೆಂಕಟೇಶ ಅವರು ರಿಟ್ ಅರ್ಜಿದಾರರೊಂದಿಗೆ ಸೇರಿ ಜಿಲ್ಲಾಧಿಕಾರಿಯವರಲ್ಲಿ ಜು.12 ಹಾಗೂ ಜು.18ರಂದು ಖುದ್ದಾಗಿ ತೆರಳಿ ನೌಕರರ ಸಂಘದ ಚುನಾವಣೆ ರದ್ದುಗೊಳಿಸಿ ಹೊಸ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸುವಂತೆ ಆದೇಶಿಸಲು ಕಾರಣೀಭೂತರಾಗಿದ್ದಾರೆ. ಇದರಿಂದ ಜಿಲ್ಲಾಧಿಕಾರಿಗಳು ನ್ಯಾಯಾಂಗ ನಿಂದನೆ ಕಾರ್ಯ ಎಸಗುವಂತಾಯಿತು.
ವೈಯಕ್ತಿಕ ಹಾಗೂ ಪೂರ್ವಾಗ್ರಹ ಪೀಡನೆಯ ಹಿತಾಸಕ್ತಿಗಾಗಿ ತಮ್ಮ ಆಪ್ತ ಸಹಾಯಕ ಹುದ್ದೆಯ ಪ್ರಭಾವ ಬಳಸಿ ಜಿಲ್ಲಾಡಳಿತವನ್ನು ನ್ಯಾಯಾಲಯದ ವಿರುದ್ಧ ನಡೆದುಕೊಳ್ಳುವಂತೆ ಮಾಡಿದ್ದು, ಇಂತಹ ಕಳಂಕಿತ ನೌಕರ ದಕ್ಷ ಶಾಸಕರಲ್ಲಿರುವುದು ಸಮಂಜಸವಲ್ಲ. ಕೂಡಲೇ ಡಿ.ವೆಂಕಟೇಶ ಅವರನ್ನು ತಮ್ಮ ಆಪ್ತ ಸಹಾಯಕ ಸ್ಥಾನದಿಂದ ಮುಕ್ತಗೊಳಿಸಿ ದಕ್ಷ ನೌಕರನನ್ನು ನಿಯುಕ್ತಿಗೊಳಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.