ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ: ಬಾದರ್ಲಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.23
ಅಧಿಕ ಮತಗಳ ಅಂತರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲವು ತಂದುಕೊಟ್ಟ ಮತದಾರರಿಗೆ ನಾನು ಋಣಿಯಾಗಿದ್ದು ಯಾವುದೇ ಕಾರಣಕ್ಕೂ ಅವರ ಅಭಿಮಾನಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.
ತುರ್ವಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತುರ್ವಿಹಾಳ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರೂ ಸಿಂಧನೂರು ತಾಲೂಕಿಗೆ ಒಳಪಡುತ್ತದೆ. ಈ ಕ್ಷೇತ್ರದೊಂದಿಗೆ ತಮಗೆ ಅವಿನಾಭಾವ ಸಂಬಂಧ ಇರುವುದರಿಂದ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ಹೇಳಿದರು.
ಮತ್ತೊಬ್ಬ ಸನ್ಮಾನಿತ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಭಾಗ ಖುಷ್ಕಿ ಪ್ರದೇಶವಾಗಿರುವುದರಿಂದ ಅವರಿಗೂ ನೀರು ತಲುಪಿಸುವ ಹಿನ್ನೆಲೆಯಲ್ಲಿ ಕನಕನಾಲಾ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ. ವೈದ್ಯಕೀಯ ಮತ್ತು ಶಿಕ್ಷಣ ಅಭಿವೃದ್ಧಿಗೂ ಶ್ರಮಿಸುವುದಾಗಿ ಹೇಳಿದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಮುಖಂಡರಾದ ಬಸವಂತರಾಯ ಕುರಿ, ಮಲ್ಲನಗೌಡ ದೇವರಮನಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಫಾರೂಕ್‌ಸಾಬ ಖಾಜಿ, ಬಿ.ವೆಂಕಪ್ಪ, ಮೌಲಪ್ಪಯ್ಯ ಗುತ್ತೇದಾರ, ಶಾಮೀದ್‌ಸಾಬ, ಗೂಳಪ್ಪ ಕುಂಟೋಜಿ, ವಿರುಪಣ್ಣ ಸಾಹುಕಾರ, ಪಂಪಾಪತಿ ಸಾಹುಕಾರ, ಮುದುಕಪ್ಪ ಸಾಹುಕಾರ, ಅಮರೇಶ ಗಚ್ಚಿನಮನಿ, ಮರಿಯಪ್ಪ ನಾಯಕ, ಬಸವರಾಜ ಕಂದಗಲ್ ಮತ್ತಿತರರು ಭಾಗವಹಿಸಿದ್ದರು. ರುದ್ರಸ್ವಾಮಿ ಕೆಂಡದಮಠ ಸ್ವಾಗತಿಸಿದರು. ನಿಂಗಪ್ಪ ಕಟ್ಟಿಮನಿ ವಂದಿಸಿದರು.
--
ಲಯನ್ಸ್ ಕ್ಲಬ್ ಹೆರಿಟೇಜ್ ಪದಾಧಿಕಾರಿಗಳ ಪದಗ್ರಹಣ
ರಾಯಚೂರು: ರಾಯಚೂರು ಲಯನ್ಸ್ ಕ್ಲಬ್ ಹೆರಿಟೇಜ್‌ನ ನೂತನ ಪದಾಧಿಕಾರಿಗಳಿಂದ ಪದಗ್ರಹಣ ಸಮಾರಂಭವನ್ನು ಜು. 21ರಂದು ಸಾವಿರ ದೇವರ ಸಂಸ್ಥಾನ ಮಠ ಎಲೆಬಿಚ್ಚಾಲಿ ಮಠದಲ್ಲಿ ವೀರಭದ್ರ ಶಿವಾಚಾರ್ಯರಿಂದ ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ 2013- 14ನೇ ಸಾಲಿನ ಅಧ್ಯಕ್ಷರಾಗಿ ಲಯನ್ಸ್ ಕ್ಲಬ್‌ನ ಮಲ್ಲಿಕಾರ್ಜುನ, ಕಾರ್ಯದರ್ಶಿಯಾಗಿ ಲಯನ್ಸ್ ಎಸ್.ಎಚ್. ವಿನಯಕುಮಾರ ಹಾಗೂ ಖಜಾಂಚಿಯಾಗಿ ಲಯನ್ಸ್ ಆಶಾದೇವಿ, ಉಪಾಧ್ಯಕ್ಷರಾಗಿ ಪಾರ್ವತಿ, ಸಹಕಾರ್ಯದರ್ಶಿಯಾಗಿ ಮಲ್ಕಂಬ ರಾಮಪ್ರಸಾದ್ ಅವರನ್ನು ನೇಮಕ ಮಾಡಲಾಯಿತು. ಕ್ಲಬ್‌ನ ಡಾ. ರಮೇಶ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ಲಯನ್ಸ್ ಲಾವಣ್ಯ ಚೂಡಿ, ಸಮಿತಿ ಸದಸ್ಯರಾದ ಲಯನ್ಸ್ ಮಲ್ಲಿಕಾರ್ಜುನ ಮಾಚನೂರು, ಲಯನ್ಸ್ ಚೂಡಿ ಶ್ರೀನಿವಾಸ, ಮಲ್ಕಂಬಾ ಜ್ಯೋತಿ, ಲತಾ ಗುಜಾರ, ಶೈಲಜಾ ಪಾಟೀಲ್, ಶಾರದ ಮಲ್ಲಿಕಾರ್ಜುನ, ಡಾ. ಮಲ್ಲಿಕಾರ್ಜುನ ಸಿರವಾರ, ಅಖಿಲಾ, ರೂಪಾ ಸೇರಿದಂತೆ ಉಪಸ್ಥಿತರಿದ್ದರು.