ಬಿಸಿಯೂಟ ಅವ್ಯವಸ್ಥೆ; ಖಂಡನೆ
ಸಿಂಧನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಅಕ್ಷರ ದಾಸೋಹದಡಿಯಲ್ಲಿ ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಬಿಸಿಯೂಟ ಅವ್ಯವಸ್ಥೆಯಿಂದ ಕೂಡಿದೆ ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯ ರಾಜ್ಯ ಸಂಚಾಲಕ ಕೆ.ಬಾಳಪ್ಪ ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆ, ತಾಲೂಕು, ಹಳ್ಳಿಗಳಲ್ಲಿ ಬಿಸಿಯೂಟದ ಅಕ್ಕಿಯಲ್ಲಿ ಕಲ್ಲು, ಮಣ್ಣು, ಗಾಜಿನ ಚೂರಿನಿಂದ ಕೂಡಿದ ಆಹಾರ ಸೇವನೆಯಿಂದಾಗಿ ವಿದ್ಯಾರ್ಥಿಗಳು ದೇಶದಾದ್ಯಂತ ಕಿಡ್ನಿ ವೈಫಲ್ಯ, ನರರೋಗ, ಮೆದುಳು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಜಾಗೃತಗೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಡ್ಡೆಪ್ಪ ತೂಗೇಮನಿ, ಹಸನ್ ಟೇಲರ್, ವೆಂಕಟೇಶ ಕಟ್ಟಿಮನಿ, ಸಾಯಿನಾಥ ಭಟ್, ಆಂಜನೇಯ ಗುಡಗುಂಟಿ ಮತ್ತಿತರರು ಆಗ್ರಹಿಸಿದ್ದಾರೆ.
'ವಸತಿ' ಅನುದಾನ ಬಿಡುಗಡೆಗೆ ಆಗ್ರಹ
ದೇವದುರ್ಗ: ಇಂದಿರಾ ಅವಾಸ್ ಯೋಜನೆ ಅಡಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಕೂಡಲೇ ಬಿಲ್ ಪಾವತಿಸುವಂತೆ ಆಗ್ರಹಿಸಿ ಕರವೇ ಜಾಲಹಳ್ಳಿ ಹೋಬಳಿ ಘಟಕದ ಕಾರ್ಯಕರ್ತರು ಈಚೆಗೆ ಗ್ರಾಮದ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಜಾಲಹಳ್ಳಿ ಗ್ರಾಪಂ ಮುಂದೆ ಧರಣಿ ನಡೆಸಿ, ಮಾಜಿ ಶಾಸಕ ಕೆ.ಶಿವನಗೌಡ ನಾಯಕ ತಮ್ಮ ಅಧಿಕಾರವಧಿಯಲ್ಲಿ ಬಡ ವಸತಿರಹಿತರಿಗೆ ಮನೆ ಮಂಜೂರು ಮಾಡಿದ್ದು, ಮಂಜೂರಾದ ಮನೆಗಳ ಫಲಾನುಭವಿಗಳಿಗೆ ಮನೆ ನಿರ್ಮಿಸಿದ್ದರೂ ಗ್ರಾಪಂ.ನಿಂದ ಸಹಾಯಧನದ ಚೆಕ್ ನೀಡಿಲ್ಲ ಎಂದು ಆರೋಪಿಸಿದರು. ಜಾಲಹಳ್ಳಿ ಗ್ರಾಪಂ ವ್ಯಾಪ್ತಿಯ ಜಾಲಹಳ್ಳಿ ಗ್ರಾಮಕ್ಕೆ 2011- 12ನೇ ಸಾಲಿಗೆ 1,100 ಇಂದಿರಾ ಆವಾಸ್ ಮನೆಗಳು ಮಂಜೂರಾಗಿದ್ದು ಫಲಾನುಭವಿಗಳಿಗೆ ಮನೆ ನಿರ್ಮಿಸಿ ನಾಲ್ಕು ತಿಂಗಳಾದರೂ ಇದುವರೆಗೆ ಹಣ ದೊರೆತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಗುರುರಾಜ ತೊಟದ, ಹೋಬಳಿ ಘಟಕದ ಅಧ್ಯಕ್ಷ ನಂದಪ್ಪ, ಭೀಮನಗೌಡ, ಬಸವರಾಜ ಗೋಪಾಳಪುರ, ಶ್ರೀನಿವಾಸ ತಿಂಪೂರ, ಅಮರೇಶ ಸೇರಿ ಅನೇಕರಿದ್ದರು.
ಜಲಾಶಯಕ್ಕೆ ಡಿಸಿ, ಎಸ್ಪಿ ಭೇಟಿ
ಹುಣಸಗಿ: ಸುರಪುರ ತಾಲುಕಿನ ಬಸವಸಾಗರ ಜಲಾಶಯಕ್ಕೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಮತ್ತು ಎಸ್ಪಿ ವಂಶಿಕೃಷ್ಣ ಮಂಗಳವಾರ ಭೇಟಿ ನೀಡಿ ಜಲಾಶಯದ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಜಮಾದಾರ್, ಪ್ರಕೃತಿ ವಿಕೋಪ ನಿರ್ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.