ಸುರಾನಾ ಕಂಪನಿ 504 ಎಕರೆ ಜಮೀನು ಹಿಂಪಡೆಯಿರಿ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.23
ನಗರದ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಸುರಾನಾ ಕೈಗಾರಿಕಾ ಕೇಂದ್ರ ಸ್ಥಾಪನೆಗೆ 324 ಎಕರೆ ಹಾಗೂ ಸುರಾನಾ ಕಾರ್ಖಾನೆ ಸಿಬ್ಬಂದಿ ವಸತಿ ಉದ್ದೇಶಕ್ಕೆ ಹಂಚಿಕೆ ಮಾಡಿದ 180ಎಕರೆ ಸೇರಿ ಒಟ್ಟು 504 ಜಮೀನು ಹಿಂದಕ್ಕೆ ಪಡೆದು ಕೈಗಾರಿಕಾ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಿದ ಉದ್ಯಮಿಗಳಿಗೆ ವಿತರಿಸಬೇಕೆಂದು ಬಿಜೆಪಿ ವಾಣಿಜ್ಯೋದ್ಯಮ ವಿಭಾಗದ ರಾಷ್ಟ್ರೀಯ ಸಹಸಂಚಾಲಕ ತ್ರಿವಿಕ್ರಮ ಜೋಷಿ ಒತ್ತಾಯಿಸಿದರು.
ಷರತ್ತು ಮೀರಿದ ಕಂಪನಿ: ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಾನಾ ಕೈಗಾರಿಕಾ ಕೇಂದ್ರ ಸ್ಥಾಪನೆಗೆ 324 ಎಕರೆ ಜಮೀನು ವಿತರಿಸಲಾಗಿದೆ. ಆದರೆ ಸುರಾನಾ ಕಂಪನಿ ಸ್ಥಾಪಿಸುವ ಸಂದರ್ಭದಲ್ಲಿ ಬಳ್ಳಾರಿಯ ರಾಮನಗರದಲ್ಲಿ ಕಬ್ಬಿಣದ ಗಣಿ ಒದಗಿಸುವಂತೆ ಸರ್ಕಾರಕ್ಕೆ ಷರತ್ತು ವಿಧಿಸುವ ಜೊತೆಗೆ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾಪನೆಗೆ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಷರತ್ತು ವಿಧಿಸಿತ್ತು. ಆದರೆ ಸರ್ಕಾರದಿಂದ ಕಬ್ಬಿಣದ ಗಣಿ ಮತ್ತು ಕಲ್ಲಿದ್ದಲು ಹಂಚಿಕೆ ಮಾಡದೆ ಇರುವ ಕಾರಣ ಸುರಾನಾ ಕಂಪನಿಯಲ್ಲಿ ಉತ್ಪಾದನೆ ನಡೆಯುತ್ತಿಲ್ಲ. ಇದರಿಂದ ಕಂಪನಿಯ 170ಕ್ಕೂ ಅಧಿಕ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಅದೇ ರೀತಿ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಸುರಾನಾ ಕಂಪನಿ ಸಿಬ್ಬಂದಿಗೆ ವಸತಿ ಕಲ್ಪಿಸಲು 180 ಎಕರೆ ಜಮೀನು ನೀಡಲಾಗಿತ್ತು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉದ್ದೇಶಿತ ಯೋಜನೆಗೆ ಅಂದಿನ ಸಚಿವ ಮುರುಗೇಶ ನಿರಾಣಿ ಅವರು ತಡೆಯಾಜ್ಞೆ ನೀಡಿದ್ದರು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ರು. 3 ಕೋಟಿ ವೆಚ್ಚದಲ್ಲಿ ನಿವೇಶನ ಅಭಿವೃದ್ಧಿ ಕಾಮಗಾರಿ ಆರಂಭಿಸಿದೆ. ನಿಯಮ ಬಾಹಿರವಾಗಿ ನೀಡಿದ ಜಮೀನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ಹೈಕೋರ್ಟ್ ಮೊರೆ ಹೋಗುವ ಎಚ್ಚರಿಕೆ: ಇತ್ತೀಚಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಸುರಾನಾ ಕಂಪನಿಗೆ ಭೇಟಿ ನೀಡದ ಸಂದರ್ಭದಲ್ಲಿ ಅವರು ಕೇಳಿದ ನಾಲ್ಕು ಪರವಾನಗಿ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದು, ಇದರಿಂದ ಸುರಾನಾ ಕಂಪನಿ ಪುನರಾರಂಭ ಅನಿಶ್ಚಿತತೆ ಎಂದು ಕಂಡುಬರುತ್ತಿದೆ. ಕಾರಣ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸುಮಾರು 70 ಜನ ಉದ್ಯಮಿಗಳು ಜಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸುರಾನಾ ಕಂಪನಿಗೆ ನೀಡಿರುವ ಒಟ್ಟು 504 ಎಕರೆ ಜಮೀನು ಕೂಡಲೇ ಹಿಂದಕ್ಕೆ ಪಡೆದು ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಿದ ಉದ್ಯಮಿಗಳಿಗೆ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕ ಹಿತಾಸಕ್ತಿ ಕೋರಿ ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಆರ್. ತಿಮ್ಮಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಬಡವರಿಗೆ ಹಂಚಿಕೆ ಮಾಡಲು ಛತ್ತಿಸ್ಗಡದಿಂದ ಅಕ್ಕಿ ತರಿಸುವ ಪ್ರಮೇಯ ಉದ್ಭವಿಸುವುದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 2.50 ಕೋಟಿ ಎಪಿಎಲ್ ಕಾರ್ಡುದಾರರಿಗೆ ಸರಾಸರಿ 13 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು.
ಛತ್ತೀಸ್ಗಡ ಅಕ್ಕಿ ಬೇಕಿಲ್ಲ: ಆದರೆ ಪ್ರಸ್ತುತ ಸರ್ಕಾರ ಕಾರ್ಡುದಾರರಿಗೆ ಅಕ್ಕಿ ಹಂಚಿಕೆ ಸ್ಥಗಿತಗೊಳಿಸಲಾಗುವುದೆಂದು ಆದೇಶ ಹೊರಡಿಸಿದೆ. ಇದರಿಂದ ಈ ಹಿಂದೆ ರಾಜ್ಯದಲ್ಲಿ 2.50 ಕೋಟಿ ಎಪಿಎಲ್ ಕಾರ್ಡುದಾರರಿಗೆ ಹಂಚಿಕೆ ಮಾಡುತ್ತಿದ್ದ ಅಕ್ಕಿ ಈಗ ಉಳಿತಾಯವಾಗಲಿದೆ. ಇದರಿಂದ ಛತ್ತೀಸ್ಗಡದಿಂದ ತರಿಸುವ ಪ್ರಮೇಯ ಉದ್ಭವಿಸುವುದಿಲ್ಲ. ಅನ್ನಭಾಗ್ಯ ಯೋಜನೆಗೆ ಒಳಪಡುವ 1.50 ಕೋಟಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಸಮರ್ಪಕವಾಗಿ ತಲುಪದೆ ಕೇವಲ ಶೇ.20ರಿಂದ 25ರಷ್ಟು ಜನರಿಗೆ ಮಾತ್ರ ಪಡಿತರ ವಿತರಿಸಲಾಗುತ್ತಿದೆ ಎಂದು ದೂರಿದರು.
ನಗರದಲ್ಲಿ ಮುಖ್ಯರಸ್ತೆ ಅತಿಕ್ರಮಣ ತೆರವು ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಚತುಷ್ಪಥ ರಸ್ತೆ ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದ್ದು, ರಸ್ತೆ ಡಾಂಬರೀಕರಣ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ನಿಯಮಾನುಸಾರ ಕೈಗೊಳ್ಳಲಾಗುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಂಡೇಶ ವಲ್ಕಂದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮಾಕಾಂತ ಯಾದವ್, ನಗರಸಭೆ ಸದಸ್ಯರಾದ ನರಸಪ್ಪ ಯಕ್ಲಾಸಪೂರ, ಆಂಜನೇಯ ಯಕ್ಲಾಸಪುರ, ರೈತ ಮೋರ್ಚಾದ ನಾರಾಯಣರಾವ್ ಇದ್ದರು.
--