ಬೆಳೆ ವಿಮಾ ಯೋಜನೆ
ರಾಯಚೂರು: ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಿಲ್ಲೆಯ ರಾಯಚೂರು, ಸಿಂಧನೂರು, ಮಾನವಿ ಮತ್ತು ದೇವದುರ್ಗ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಯೋಜನೆಯಡಿ ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ಭಾಗವಹಿಸಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮೆ ಅಥವಾ ರಾಷ್ಟ್ರೀಯ ಬೆಳೆ ವಿಮೆ ಯೋಜನೆ ಇವುಗಳಲ್ಲಿ ಯಾವುದಾದರೊಂದು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಳ್ಳಬೇಕು.
ಬೆಳೆ ಸಾಲ ಪಡೆಯುವ ರೈತರಿಗೆ ಈ ಯೋಜನೆ ಕಡ್ಡಾಯವಾಗಿದೆ. ಬೆಳೆ ವಿಮೆ ಮಾಡಿಸಬೇಕಾದ ಬೆಳೆಗಳಾದ ಸಜ್ಜೆ ಮತ್ತು ಎಣ್ಣೆಕಾಳು ಬೆಳೆಗಳಿಗೆ ಶೇ. 3.5ರಂತೆ ವಿಮಾ ಕಂತು ಹಾಗೂ ಇತರೆ ಆಹಾರ ಧಾನ್ಯಗಳಿಗೆ ಶೇ. 2.5 ರಂತೆ ಹಾಗೂ ವಾಣಿಜ್ಯ ಬೆಳೆಗಳಾದ ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳಿಗೆ ಶೇ. 6ರಂತೆ ವಿಮಾ ಕಂತು ನಿಗದಿಪಡಿಸಲಾಗಿದೆ.
ಈ ಯೋಜನೆಯಲ್ಲಿ ರೈತರು ಪಾಲ್ಗೊಳ್ಳಲು ಜು.31 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಹತ್ತಿರದ ರೈತ ಸಂಪರ್ಕಕ್ಕೆ ಕೇಂದ್ರಕ್ಕೆ ಭೇಟಿ ನೀಡಲು ಕೋರಲಾಗಿದೆ.