ಮಕ್ಕಳ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ: ಕೃಷ್ಣ ಭಟ್
ಕನ್ನಡಪ್ರಭ ವಾರ್ತೆ, ರಾಯಚೂರು, ಜು.24
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳನ್ನು ಸುಶಿಕ್ಷಿತರಾಗಿಸುವತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಈ ಬಗ್ಗೆ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ. ಕೃಷ್ಣ ಭಟ್ ಸಲಹೆ ನೀಡಿದರು.
ನಗರದ ಐಎಂಎ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಂದ ಏರ್ಪಡಿಸಿದ್ದ ಲೈಂಗಿಕ ಅಪರಾಧ ಮತ್ತು ಮಾದಕ ವ್ಯಸನಿಗಳಿಂದ ಮಕ್ಕಳ ರಕ್ಷಣೆ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಸಮಯ ಪ್ರಜ್ಞೆ ಅಗತ್ಯ: ಮಕ್ಕಳನ್ನು ತಾತ್ಸಾರದಿಂದ ಕಾಣುವ ಮನೋಭಾವ ಸರಿಯಲ್ಲ. ಮಕ್ಕಳ ಮನಸ್ಸನ್ನು ಅರಿತು ಅವರಿಗೆ ಒಳ್ಳೆಯ ಮಾರ್ಗದರ್ಶನ ಮಾಡಬೇಕು. ತಪ್ಪಿದಲ್ಲಿ ಸಂತೋಷ ಹಾಗೂ ತೃಪ್ತಿಕರ ಜೀವನ ನಡೆಸಬೇಕಾದ ಮಕ್ಕಳು ಕಂಟಕಪ್ರಾಯರಾಗಿ ಸಮಾಜ, ಕುಟುಂಬದ ಸ್ವಾಸ್ಥ್ಯ ಹಾಳುಗೆಡುವಂಥ ಕೃತ್ಯಕ್ಕೆ ಮುಂದಾಗುತ್ತಾರೆಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಲೈಂಗಿಕ ಶೋಷಣೆ ಮಾತ್ರವಲ್ಲದೆ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯ ಕಡೆಗೂ ಹೆಚ್ಚಿನ ಮಹತ್ವ ಪಾಲಕರು ನೀಡಬೇಕಾಗಿದೆ. ತರಬೇತಿಗೆ ಆಗಮಿಸಿರುವ ಶಿಕ್ಷಕರು ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಉತ್ತಮ ನಡೆ, ನುಡಿಗಳಿಂದ ಮಕ್ಕಳಲ್ಲಿ ಪರಿವರ್ತನೆ ತರಬೇಕು. ಆಗ ಮಾತ್ರ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಲು ಸಾಧ್ಯ ಎಂದರು.
ದುಶ್ಚಟಗಳಿಗೆ ಬಲಿ ಆತಂಕಕಾರಿ: ಮಕ್ಕಳು ಸಂವೇದನಾಶೀಲರಾಗಿದ್ದು, ಅವರಿಗೆ ತಿಳಿ ಹೇಳುವ ಮೂಲಕ ಲೈಂಗಿಕ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಬಹುದು. ಮಕ್ಕಳಿಗೆ ಭದ್ರತೆ ಒದಗಿಸುವುದು, ಮಕ್ಕಳನ್ನು ನಿರ್ಲಕ್ಷಿಸುವುದರಿಂದ ಇಂಥ ಕೃತ್ಯ ತಡೆಯಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾತನಾಡಿ, ಈ ಕಾರ್ಯಕ್ರಮವು ಜಿಲ್ಲೆಯಲ್ಲಿ ಜರುಗುತ್ತಿರುವುದು ತುಂಬಾ ಸಂತೋಷದ ವಿಷಯ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಹೆಚ್ಚು ಆತಂಕಕಾರಿ ಬೆಳವಣಿಗೆಗಳಾಗಿದ್ದು, ಮಕ್ಕಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉತ್ತಮ ಪ್ರಜೆಗಳನ್ನಾಗಿ ರೂಪಿಸಿ: ಎಸ್ಪಿ ಎಸ್.ಬಿ. ಬಿಸನಳ್ಳಿ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಮೊದಲ ಜವಾಬ್ದಾರಿ ಪಾಲಕರ ಮೇಲಿದೆ. ದೇಶದ ಮುಖ್ಯ ಸಂಪನ್ಮೂಲಗಳಲ್ಲಿ ಒಂದಾದ್ದು ಮಾನವ ಸಂಪನ್ಮೂಲ. ಬೇಧ-ಭಾವಗಳನ್ನು ಎಣಿಸದೆ ಪ್ರತಿ ಮಗುವಿನ ರಕ್ಷಣೆ ಜವಾಬ್ದಾರಿ ದೇಶದ ಪ್ರಜೆಗಳದ್ದಾಗಿದೆ ಎಂದು ಹೇಳಿದರು.
ಎಎಸ್ಪಿ ದಿವ್ಯಾ ಗೋಪಿನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿ ಉಪನಿರ್ದೇಶಕಿ ನರ್ಮದಾ ಆನಂದ ಮಾತನಾಡಿದರು.
ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ ವಹಿಸಿದ್ದರು. ಜಿಪಂ ಸಿಇಒ ಟಿ. ಜ್ಞಾನಪ್ರಕಾಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮಹ್ಮದ ಮುಜಾಹಿದ್ ಉಲ್ಲಾ, ನವೋದಯ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಎಸ್. ಆರ್. ಹೆಗಡೆ, ರಿಮ್ಸ್ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಬಸವರಾಜ ಮತ್ತಿತರರಿದ್ದರು.
ತರಬೇತಿಯಲ್ಲಿ ವಿವಿಧ ತಾಲೂಕುಗಳಿಂದ ಆಯ್ದ ಪ್ರಶಿಕ್ಷಣಾರ್ಥಿಗಳು, ವೈದ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.