ಸಂತ್ರಸ್ತರಿಗೆ 7.18 ಲಕ್ಷ ನಿಧಿ ಸಂಗ್ರಹ
ಕ.ಪ್ರ. ವಾರ್ತೆ, ಸಿಂಧನೂರು, ಜು.24
ಉತ್ತರಾಖಂಡದಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಉಂಟಾದ ಭೀಕರ ಪ್ರವಾಹದಿಂದ ಸೂರು ಕಳೆದುಕೊಂಡ ಸಂತ್ರಸ್ತರಿಗಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಯುವಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಒಟ್ಟು 7.18 ಲಕ್ಷ ಪರಿಹಾರ ನಿಧಿ ಸಂಗ್ರಹಿಸಲಾಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರದಾರ ತಿಳಿಸಿದರು.
ನಗರದಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯುವ ಕಾಂಗ್ರೆಸ್‌ನಿಂದ ನಿರಂತರವಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಅದರ ಮುಂದುವರಿದ ಭಾಗವಾಗಿ ಉತ್ತರಾಖಂಡ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ನಿಧಿ ಸಂಗ್ರಹಿಸಲಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ಮುಖಾಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ಹಣವನ್ನು ಕಳುಹಿಸಲಾಗಿದೆ. ಮೊದಲ ಪ್ರಯತ್ನದಲ್ಲಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿರುವುದು ಖುಷಿ ತಂದಿದೆ ಎಂದು ಹೇಳಿದರು.
ಯುವ ನಾಯಕರಿಗೆ ಮಣೆ: ಕೊಪ್ಪಳ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ರಾಹುಲ್‌ಗಾಂಧಿ ಯುವ ನಾಯಕರಿಗೆ ಮಣೆ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಸದಸ್ಯರಾದ ಶೇಖರಪ್ಪ ಗಿಣಿವಾರ, ಪ್ರಭುರಾಜ ಶರಣಯ್ಯ, ಮೆಹಬೂಬ, ಮಾಜಿ ಪುರಸಭೆ ಸದಸ್ಯ ಎನ್.ಅಮರೇಶ, ದುರುಗಪ್ಪ ಕಟಾಲಿ, ಸುರೇಶ ಮತ್ತಿತರರು ಉಪಸ್ಥಿತರಿದ್ದರು.