ಸಹೋದರನ ಕೊಲೆ; ಅಪರಾಧಿಗೆ ಶಿಕ್ಷೆ
ರಾಯಚೂರು: ನಗರದ ಬ್ರೇಸ್ತವಾರ ಪೇಟೆಯಲ್ಲಿ ಈ ಹಿಂದೆ ಸಹೋದರನನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಲ್ಲಿನ ಬ್ರೇಸ್ತವಾರಪೇಟೆಯಲ್ಲಿರುವ ವೀರಭದ್ರೇಶ್ವರ ದೇವಾಲಯದ ಬಳಿ ಆರೋಪಿ ಷಣ್ಮುಖಪ್ಪ ಎಂಬಾತ ತನ್ನ ಸಹೋದರ ರುದ್ರಪ್ಪನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ಮಾಡಿ ಚರಂಡಿಯ ನೀರಿನಲ್ಲಿ ಆತನನ್ನು ಮುಳುಗಿಸಿ ಕೊಲೆ ಮಾಡಿದ್ದ. ಈ ಬಗ್ಗೆ ಪ್ರಕರಣ ಸದರ್ ಬಜಾರ್ ಠಾಣೆಯ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಪರ ಸತ್ರ ನ್ಯಾಯಾಧೀಶರಾದ ಸತ್ಯನಾರಾಯಣಾಚಾರ್ಯ ಕಾಡ್ಲೂರು ಅವರು ಆರೋಪಿ ಷಣ್ಮುಖನಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ಎಂ.ರಂಗಯ್ಯ ವಾದ ಮಂಡಿಸಿದ್ದರು.
30ರಂದು ಡಿ.ಇಡಿ ಮರು ಪರೀಕ್ಷೆ
ರಾಯಚೂರು: ನಗರದ ಯರಮರಸ್‌ನಲ್ಲಿರುವ ಆನಂದ ಪ್ರೌಢಶಾಲೆ ಹಾಗೂ ಡಯಟ್ ಕೇಂದ್ರಗಳಲ್ಲಿ ಜು.30ರಂದು ಡಿ.ಇಡಿ ಮರುಪರೀಕ್ಷೆ ಆಯೋಜಿಸಲಾಗಿದೆ. ಜು.12ರಂದು ನಡೆದಿದ್ದ ದ್ವಿತೀಯ ಡಿ.ಇಡಿ ಪರೀಕ್ಷೆಯ ವೇಳೆ ವಿಜ್ಞಾನ ಮತ್ತು ಗಣಿತ ವಿಷಯಗಳ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿರುವುದು ಪತ್ತೆಯಾದ ಹಿನ್ನೆಲೆ ಈ ಕೇಂದ್ರಗಳಲ್ಲಿ ಈ ವಿಷಯಗಳಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾತ್ರ ಜು.30ರಂದು ಎರಡೂ ಪತ್ರಿಕೆಗಳ ಮರುಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು, ಡಿ.ಇಡಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಪೋಷಕರು ಈ ವಿಷಯ ಗಮನಿಸುವಂತೆ ನಿರ್ದೇಶಕರು, ಇತರ ಪರೀಕ್ಷೆಗಳು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದ್ದಾರೆ.