ಸ್ವಾತಂತ್ರ್ಯೋತ್ಸವ ಆಚರಣೆಗೆ ನಿರ್ಧಾರ
ರಾಯಚೂರು: ನಗರದ ಕೃಷಿ ವಿವಿ ಕ್ರೀಡಾಂಗಣದಲ್ಲಿ ಪ್ರಸಕ್ತ ವರ್ಷ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಗರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಸ್ವಾತಂತ್ರ್ಯೋತ್ಸವದ ಮುಖ್ಯ ಕಾರ್ಯಕ್ರಮ ರಾಯಚೂರು ಕೃಷಿ ವಿವಿ ಕ್ರೀಡಾಂಗಣದಲ್ಲಿ ಈ ಬಾರಿ ಆಯೋಜಿಸಲು ಸಭೆ ನಿರ್ಧರಿಸಿತು. ಸದ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ನೀರು ತುಂಬಿದ್ದು ಈ ಹಿನ್ನೆಲೆ ಕೃಷಿ ವಿವಿ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿ, ಸಮಾರಂಭ ಆಚರಣೆಗೆ ನೇಮಿಸುವ ಸಮಿತಿ ಅಧಿಕಾರಿಗಳು ಸಭೆಗಳನ್ನು ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ನಿರ್ಲಕ್ಷಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನಗರದಲ್ಲಿ ಸ್ವಾತಂತ್ರ್ಯ ದಿನದಂದು ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಿದ ಅವರು, ಜಿಲ್ಲಾ ಕ್ರೀಡಾಂಗಣದಿಂದ ಶಾಲಾ ಮಕ್ಕಳನ್ನು ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಕೃಷಿ ವಿವಿ ಗೆ ಕರೆದೊಯ್ಯುವುದು ಮತ್ತು ಮರಳಿ ಕರೆತರುವ ಕಾರ್ಯ ಮಾಡಬೇಕು ಎಂದು ಆದೇಶಿಸಿದರು. ಸಭೆಯಲ್ಲಿ ಎಸ್ಪಿ ಎಸ್.ಬಿ. ಬಿಸನಳ್ಳಿ, ಜಿಪಂ ಸಿಇಒ ಜ್ಞಾನಪ್ರಕಾಶ್, ಹೆಚ್ಚುವರಿ ಡಿಸಿ ಎಂ. ತಿಮ್ಮಪ್ಪ, ಡಿಡಿಪಿಐ ಪರಮೇಶ್ ಸೇರಿ ಅನೇಕರಿದ್ದರು.
ಅಧಿಕಾರಿಗಳಿಗೆ ಡಿಸಿ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಣೆಕಟ್ಟೆಗಳಲ್ಲಿನ ಹೆಚ್ಚುವರಿ ನೀರು ಹೊರಹರಿಸಲಾಗುತ್ತಿದ್ದು, ನದಿ ಪಾತ್ರದ ಜನರ ರಕ್ಷಣೆ ಮತ್ತಿತರ ಕೆಲಸ ಕಾರ್ಯಗಳು ತುರ್ತಾಗಿ ಆಗಬೇಕಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಅನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಎಚ್ಚರಿಸಿದ್ದಾರೆ.
ಪ್ರಶಸ್ತಿ ವಿಜೇತರಿಗೆ ಅಭಿನಂದನೆ
ಸಿಂಧನೂರು: ತಾಲೂಕು ವರದಿಗಾರರಾದ ಚಂದ್ರಶೇಖರ ಬೆನ್ನೂರು, ಅಮರೇಶ ಅಲಬನೂರ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ ಅಭಿನಂದನೆ ಸಲ್ಲಿಸಿದ್ದಾರೆ. ನಿಸ್ಪಕ್ಷಪಾತವಾಗಿ ವರದಿ ಮಾಡುವ ಮೂಲಕ ದುಡಿಯುವ ವರ್ಗದ ಪರವಾಗಿ ತಮ್ಮ ಲೇಖನಗಳನ್ನು ಹರಿಬಿಡಲಿ ಎಂದು ಸಲಹೆ ನೀಡಿದ್ದಾರೆ.
--