ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಡುಗಡ್ಡೆ ಗ್ರಾಮಗಳ ಸಂಪರ್ಕ ಕಡಿತ

Lingaraj Badiger
Updated On : 26 Jul 2013, 11:43 am

ಕನ್ನಡಪ್ರಭ ವಾರ್ತೆ,ಲಿಂಗಸ್ಗೂರು,ಜು.25
ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಪರಿಣಾಮ ನಾರಾಯಣಪುರ ಜಲಾಶಯದಿಂದ 2.06 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳಗೊಂಡಿದ್ದು, ನದಿ ತೀರದ (ನಡುಗಡ್ಡೆ) ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಹರಗೋಲಿನ ಸಹಾಯದಿಂದ: ತಾಲೂಕಿನ ಕಡದರಗಡ್ಡಿ, ಯರಗೋಡಿ, ಹಂಚಿನಾಳ, ಯಳಗುಂದಿ ಸೇರಿದಂತೆ ನಡುಗಡ್ಡೆ ಗ್ರಾಮಗಳ ಜನತೆ ಹಲವಾರು ವರ್ಷಗಳಿಂದ ಲಿಂಗಸ್ಗೂರು ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳಲು ಜಲದುರ್ಗ ಗ್ರಾಮದ ಮೂಲಕ ಸುಮಾರು 40 ಕಿಮೀ ಸುತ್ತುವರಿದು ಅಥವಾ ನದಿಯಲ್ಲಿ ನೀರು ಕಡಿಮೆ ಇದ್ದಾಗ ಕಾಲ್ನಡಿಗೆಯಿಂದ ದಾಟಿ ಅಥವಾ ಹರಗೋಲಿನ ಸಹಾಯದಿಂದ ಗೋನವಾಟ್ಲ ಗ್ರಾಮಕ್ಕೆ ಆಗಮಿಸಿ ನಂತರ ಲಿಂಗಸ್ಗೂರಿಗೆ ಬಂದು ಹೋಗುತ್ತಿದ್ದರು.
ಕಳೆದ ಸುಮಾರು ಒಂದು ದಶಕದ ಹಿಂದೆ ಶೀಲಹಳ್ಳಿ ಗ್ರಾಮದ ಬಳಿ 70 ಲಕ್ಷ ಅಂದಾಜು ವೆಚ್ಚದಲ್ಲಿ ಕೃಷ್ಣಾ ನದಿಗೆ ಅಡ್ಡವಾಗಿ ಸೇತುವೆ ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿತ್ತು. ನಂತರ ಹಣದ ಕೊರತೆಯಿಂದ ಸೇತುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹಲವು ವರ್ಷಗಳ ನಂತರ ನೆನೆಗುದಿಗೆ ಬಿದ್ದಿದ್ದ ಶೀಲಹಳ್ಳಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಕಳೆದ ವರ್ಷ ಟೆಂಡರ್ ಕರೆದು ಗುತ್ತಿಗೆ ನೀಡಿ, ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಯಿತು.
ಸಂಚಾರಕ್ಕೆ ಅನುಕೂಲ: ಕಳೆದ ವರ್ಷ ಇದೆ ಸಂದರ್ಭದಲ್ಲಿ ಸೇತುವೆ ಉದ್ಘಾಟನೆಗೆ ಮುನ್ನವೇ ಕೃಷ್ಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಳದಿಂದ ಸೇತುವೆ ಮೇಲೆ ನೀರು ಬಂದು ಮೇಲ್ಛಾವಣಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಇದರಿಂದ ನಡುಗಡ್ಡೆ ಗ್ರಾಮಗಳ ಜನತೆಗೆ ಸಂಪರ್ಕ ಕಡಿತಗೊಂಡು ಮೊದಲಿನ ಪರಿಸ್ಥಿತಿ ಬಂದೊದಗಿ ಗ್ರಾಮಸ್ಥರು ವಿವಿಧ ಕೆಲಸಗಳಿಗೆ ತೆರಳಲು ಹಾಗೂ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಲು ಮತ್ತು ನಡುಗಡ್ಡೆ ಗ್ರಾಮಗಳ ಶಾಲೆಗಳಿಗೆ ಶಿಕ್ಷಕರು ಆಗಮಿಸಲು ಅನಾನುಕೂಲ ಕಲ್ಪಿಸಿತ್ತು. ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ತಕ್ಷಣ ಎಚ್ಚೆತ್ತುಕೊಂಡ ತಾಲೂಕು ಮತ್ತು ಜಿಲ್ಲಾಡಳಿತ ಸೇತುವೆ ಮೇಲೆ ನೀರಿನ ಹರಿವು ಕಡಿಮೆಯಾದ ನಂತರ ಸೇತುವೆ ದುರಸ್ತಿ ಕಾರ್ಯ ಕೈಗೊಂಡು ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು.
ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಪ್ರಸಕ್ತ ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತ ತಲುಪಿದ್ದು, ಒಳ ಹರಿವು ಹೆಚ್ಚುತ್ತಿದ್ದಂತೆ ಹಂತ ಹಂತವಾಗಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಇದರಿಂದ ನಡುಗಡ್ಡೆ ಗ್ರಾಮಗಳ ಜನತೆಗೆ ಇರುವ ಶೀಲಹಳ್ಳಿ ಬಳಿಯ ಒಂದೇ ಒಂದು ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ಇದರಿಂದ ಹಲವು ವರ್ಷಗಳ ಹಿಂದೆ ಅನುಭವಿಸುತ್ತಿದ್ದ ತ್ರಾಸಾದಾಯಕ ಪ್ರಯಾಣ ಪುನಃ ಮರುಕಳಿಸಿದೆ.
    ಕೂಡಲೇ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಶೀಲಹಳ್ಳಿ ಸೇತುವೆ ಹಾಗೂ ನಡುಗಡ್ಡೆ ಗ್ರಾಮಗಳ ಜನತೆಗೆ ಬಂದೊದಗುವ ಅನಾನುಕೂಲಗಳ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
 -ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement