ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲೋಕ ಅದಾಲತ್‌ನಿಂದ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯ

Lingaraj Badiger
Updated On : 26 Jul 2013, 11:53 am

ಕನ್ನಡಪ್ರಭ ವಾರ್ತೆ,ರಾಯಚೂರು,ಜು.25
ವಿವಿಧ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಲೋಕ ಅದಾಲತ್‌ಗಳು ಜನತೆಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವಲ್ಲಿ ನೆರವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ. ಕೃಷ್ಣ ಭಟ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ಮೋಟಾರು ವಾಹನ ಅಪಘಾತ ಕುರಿತ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು.
ಆಸಕ್ತಿ: ಕಾನೂನುಗಳ ಬಗ್ಗೆ ಕಳೆದ ಕೆಲ ವರ್ಷದಿಂದ ಜನರಲ್ಲಿ ಜಾಗೃತಿ ಮೂಡಿದೆ. ಕಾನೂನಿನ ಮೂಲಕ ನ್ಯಾಯ ಪಡೆಯುವ ಬಗ್ಗೆ ಎಲ್ಲರೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅದರಿಂದಾಗಿ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಆದರೆ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಲೋಕ ಅದಾಲತ್‌ಗಳ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಅನೇಕ ಪ್ರಕರಣಗಳನ್ನು ಪಂಚಾಯಿತಿಯ ರಾಜೀ ಮೂಲಕ ಬಗೆಹರಿಸಲಾಗುತ್ತಿತ್ತು. ಅದೇ ಮಾದರಿಯಲ್ಲಿ ಸದ್ಯ ಲೋಕ ಅದಾಲತ್ ಕಾರ್ಯನಿರ್ವಹಿಸುತ್ತಿದೆ. ಸಾಕ್ಷಿಗಳ ವಿಚಾರಣೆಯಿಲ್ಲದೇ ಶೀಘ್ರ ತೀರ್ಮಾನ ಕೈಗೊಳ್ಳುವ ಮೂಲಕ ಪ್ರಕರಣಗಳನ್ನು ಎದುರಿಸುತ್ತಿರುವ ಕಕ್ಷಿದಾರರಿಗೆ ಅನುಕೂಲ ಕಲ್ಪಿಸಿದಂತಾಗಲಿದೆ ಎಂದು ಹೇಳಿದರು.
ಶೀಘ್ರ ನ್ಯಾಯ: ಮೋಟಾರು ಅಪಘಾತ ಸಂದರ್ಭದಲ್ಲಿ ಗಾಯಗೊಂಡವರಿಗೆ ಇಲ್ಲವೇ ಮೃತರ ಸಂಬಂಧಿಗಳಿಗೆ ಲೋಕ ಅದಾಲತ್ ಮೂಲಕ ತುರ್ತಾಗಿ ಪರಿಹಾರ ಪಾವತಿ ಸಾಧ್ಯವಾಗಲಿದೆ. ಅದರಿಂದ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿದಂತಾಗಿ ಸಮಸ್ಯೆ ಪರಿಹಾರ ಕಾಣಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾತನಾಡಿ, ವಕೀಲರು ಇಂದಿನ ದಿನಗಳಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ. ಕಕ್ಷಿದಾರರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಪ್ರತಿ ತಿಂಗಳು 100 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿಯಿರಿಸಿಕೊಂಡಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದ ಅವರು, ವಕೀಲರು ತಮ್ಮ ಕಕ್ಷಿದಾರರಿಗೆ ಲೋಕ ಅದಾಲತ್‌ಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ ಪ್ರಕರಣಗಳನ್ನು ಬಗೆಹರಿಸಲು ಮುಂದಾಗಬೇಕೆಂದು  ಮನವಿ ಮಾಡಿದರು.
ವಿಲೇವಾರಿ: ಪ್ರಕರಣಗಳ ಶೀಘ್ರ ವಿಲೇವಾರಿಯಿಂದ ಆಡಳಿತ ವ್ಯವಸ್ಥೆ ಮೇಲೆ ಜನತೆಗೆ ನಂಬಿಕೆ ಹೆಚ್ಚಳ ಸಾಧ್ಯ. ಪ್ರಕರಣಗಳ ವಿಚಾರಣೆ ವಿಳಂಬವಾದಲ್ಲಿ ಕಕ್ಷಿದಾರರ ಸಮಯ ವ್ಯರ್ಥವಾಗುತ್ತದೆ. ಜತೆಗೆ ಕಕ್ಷಿದಾರರಿಗೆ ವ್ಯವಸ್ಥೆ ವಿರೋಧಿ ಅಭಿಪ್ರಾಯ ಮೂಡುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರಾದ ಸತ್ಯನಾರಾಯಣಾಚಾರ್ಯ ಕಾಡ್ಲೂರು, ಸತೀಶ್ ಸಿಂಗ್, ಮೊಹಮ್ಮದ್ ಮುಜಾಹಿದಿಲ್, ಜಿಪಂ ಸಿಇಒ ಜ್ಞಾನಪ್ರಕಾಶ್, ಎಸ್ಪಿ ಎಸ್.ಬಿ. ಬಿಸನಳ್ಳಿ, ಎಎಸ್ಪಿ ಡಾ. ದಿವ್ಯಾ ಗೋಪಿನಾಥ್,  ವಕೀಲರ ಸಂಘದ ಅಧ್ಯಕ್ಷ ರಾಜಾ ಪಾಂಡುರಂಗ ನಾಯಕ, ಉಪಾಧ್ಯಕ್ಷೆ ಈರಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣಪ್ಪ ಸೇರಿ ಅನೇಕರಿದ್ದರು. ಹಿರಿಯ ವಕೀಲರಾದ ಡಿ. ಸುರೇಶ್ ಮತ್ತು ಸಹನಾ ಹಿರೇಮಠ ಲೋಕ ಅದಾಲತ್ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧೆಡೆಯಿಂದ ಆಗಮಿಸಿದ್ದ ಕಕ್ಷಿದಾರರು, ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement