ಶರಣರ ವಚನಗಳ ಆದರ್ಶ ಅಳವಡಿಕೆ ಅಗತ್ಯ
ಕನ್ನಡಪ್ರಭ ವಾರ್ತೆ,ಸಿಂಧನೂರು,ಜು.25
ನಗರದ ವಾಸವಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಜನ್ಮದಿನೋತ್ಸವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಬಸವಕೇಂದ್ರದ ಹಿರಿಯ ಅನುಭಾವಿ ಪಿ. ವೀರಭದ್ರಪ್ಪ ಕುರಕುಂದಿ ಮಾತನಾಡಿದರು.
ಆದರ್ಶಗಳ ಅಳವಡಿಕೆ: ನಮ್ಮೆಲ್ಲರ ಜೀವನ ಉತ್ತಮವಾಗಬೇಕಾದರೆ ಹನ್ನೆರಡನೆಯ ಶತಮಾನದಲ್ಲಿನ ಶಿವಶರಣರ ವಚನಗಳನ್ನು ಓದುವುದರ ಜೊತೆಗೆ ಅವುಗಳಲ್ಲಿರುವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಮಾರಂಭಕ್ಕೆ ಚಾಲನೆ ನೀಡಿದರು.
ಭವಿಷ್ಯ ಉಜ್ವಲಗೊಳ್ಳಲಿ: ಉಪನ್ಯಾಸಕ ಗೋವಿಂದರಾಜ ಬಾರಕೇರ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿಯವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ವಚಗಳನ್ನು ಅಥೈಸಿಕೊಂಡು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದರು.
ಬಸವ ಯೋಗ ಸಮಿತಿ ಅಧ್ಯಕ್ಷ ಶಿವಣ್ಣ ಹ. ಸಣ್ಣಪ್ಪನವರ ಸಮಾರಂಭದ ಅಧ್ಯಕ್ಷತೆ ವಹಿಸಿ ವಚನಗಳ ಮಹತ್ವ ತಿಳಿಸಿದರು.
ಸಿ.ಟಿ. ಪಾಟೀಲ್ ಬಹುಮಾನ ವಿತರಿಸಿದರು. ಸಂಜಯ ಶ್ರೇಷ್ಠಿ ಅವರನ್ನು ಸನ್ಮಾನಿಸಲಾಯಿತು. ಯುವಬಸವ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ, ಬಸವ ಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಬಸವ ಯೋಗ ಸಮಿತಿಯ ಅಧ್ಯಕ್ಷ ಮಧುಸೂದನ ಗುಪ್ತಾ, ವಾಸವಿ ಬಾಲಕಿಯರ ಪ್ರೌಢಶಾಲೆ ಮುಖ್ಯಗುರು ಪರಾಂಡೆ, ನಾಗಭೂಷಣ ನವಲಿ, ಪಂಪಣ್ಣ ಹಳ್ಳಿ, ಕರೇಗೌಡ ಪೊಲೀಸ್ ಪಾಟೀಲ್, ವೀರಭಧ್ರಗೌಡ ಅಮರಾಪುರ, ದೇವಿರಮ್ಮ, ಬಸಮ್ಮ ತಾಳಿಕೋಟಿ ಉಪಸ್ಥಿತರಿದ್ದರು.
ಶಿಕ್ಷಕ ವೈ.ಬಿ. ಚಳ್ಳಮರದ ಪ್ರಾರ್ಥಿಸಿದರು. ಗುಂಡಪ್ಪ ಬಳಿಗಾರ ಸ್ವಾಗತಿಸಿ, ಬೀರಪ್ಪ ಶಂಭೋಜಿ ನಿರೂಪಿಸಿದರು.